ಶಿಕ್ಷಕಿಗೆ ಬೀಳ್ಕೊಡುಗೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಅ.20 : ಅದೊಂದು ಪುಟ್ಟ ಗ್ರಾಮದಲ್ಲಿ ಇಡೀ ಊರು ಸಿಂಗಾರಗೊಂಡಿತ್ತು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತಿದ್ದರೆ, ಪುರುಷರು ಡೊಳ್ಳು ಕುಣಿತದೊಂದಿಗೆ ಬೆಳ್ಳಿ ಸಾರೋಟಿಯಲ್ಲಿ ಶಿಕ್ಷಕಿಯನ್ನು ಕುಳ್ಳಿರಿಸಿ ಮೆರವಣಿಗೆ ಮೂಲಕ ಶಾಲೆಗೆ ಕರೆತಂದರು.
ಸಿರುಗುಪ್ಪ ತಾಲ್ಲೂಕಿನ ಕುರುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕಿ ಜ್ಯೋತಿ ಕಳೆದ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಯಾಗಿದ್ದರಿಂದ ಅವರಿಗೆ ಏರ್ಪಡಿಸಲಾದ ಬೀಳ್ಕೊಡುಗೆ ಸಮಾರಂಭ  ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರೆ, ವಿದ್ಯಾರ್ಥಿಗಳು ಮೆರವಣಿಗೆ ಉದ್ದಕ್ಕೂ ಮೆಚ್ಚಿನ ಶಿಕ್ಷಕಿಗೆ ಹೂಮಳೆಗೈದು ಬೀಳ್ಕೊಟ್ಟು ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಕಂಡು ಶಿಕ್ಷಕಿ ಜ್ಯೋತಿ ಕಣ್ಣೀರು ಹಾಕಿದರು. ಈ ಮಧ್ಯೆ ಮಕ್ಕಳು ವೇದಿಕೆ ಮೇಲೆ ಮೆಚ್ಚಿನ ಶಿಕ್ಷಕಿಗೆ ನಮಿಸುತ್ತ ಶಾಲೆ ಬಿಟ್ಟು ಹೋಗದಂತೆ ಬಿಕ್ಕಿ ಬಿಕ್ಕಿ ಅಳುತ್ತ ವಿನಂತಿಸಿ ಅಪ್ಪಿಕೊಳ್ಳುವ ದೃಶ್ಯ ಎಲ್ಲಾರ ಕಣ್ಣು ತೇವಗೊಳಿಸಿತ್ತು.
ಸರ್ಕಾರಿ ಶಾಲೆಯ ಶಿಕ್ಷಕಿಗೆ ಸಿಕ್ಕ ಈ ಅದ್ದೂರಿ ಬೀಳ್ಕೊಡುಗೆ ಯಾವ ಐಎಎಸ್ ಅಧಿಕಾರಿಗೂ ಸಿಕ್ಕಿರಲಿಕ್ಕಿಲ್ಲ ಎಂದು ಗ್ರಾಮಸ್ಥರಾದ ತಿಮ್ಮಯ್ಯ, ಗೋಪಾಲ, ರಾಮಕೃಷ್ಣ, ಯಲ್ಲಪ್ಪ, ಮಾರೆಪ್ಪ ಅಭಿಮಾನದಿಂದ ಹೇಳುತ್ತಾರೆ.

One attachment • Scanned by Gmail