ಶಿಕ್ಷಕಿಗೆ ಕೊರೊನಾ ಪಾಸಿಟಿವ್: ಶಾಲೆಗೆ ಬೀಗಬೆಳಗಾವಿಯಲ್ಲಿ 22 ಶಿಕ್ಷಕರಿಗೆ ಒಕ್ಕರಿಸಿದ ಕೊರೊನಾ

ಬೆಳಗಾವಿ,ಜ5: ತಾಲೂಕಿನ ಕಡೋಲಿ ಪ್ರೌಢಶಾಲೆಯ ಶಿಕ್ಷಕಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಶಾಲೆಯನ್ನು ಬಂದ್ ಮಾಡಲಾಗಿದೆ.
ಶಿಕ್ಷಕರಿಗೆ ಕೊರೋನಾ ದೃಢಪಡುತ್ತಿದ್ದಂತೆ ಶಾಲೆಗೆ ಸಂಪೂರ್ಣ ರಾಸಾಯನಿಕ ಸಿಂಪಡಿಸಲಾಗಿದ್ದು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ.
ಸರ್ಕಾರ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿರುವ ಹಿನ್ನೆಲೆ ಕಳೆದ ಡಿ.28ರಂದು ಕಡೋಲಿ ಶಾಲೆಯ ಎಲ್ಲಾ ಶಿಕ್ಷಕರು ಹಿಂಡಲಗಾ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು.
ಈ ವೇಳೆ ಇಲ್ಲಿನ ಎಲ್ಲಾ ಶಿಕ್ಷಕರ ವರದಿ ನೆಗೆಟಿವ್ ಬಂದಿತ್ತು. ಈಗ ಕೊರೊನಾ ಪಾಸಿಟಿವ್ ಬಂದಿರುವ ಶಿಕ್ಷಕಿಯ ವರದಿ ಸಹ ನೆಗೆಟಿವ್ ಬಂದಿತ್ತು. ಇದಾದ ಬಳಿಕ ಈ ಶಿಕ್ಷಕಿಗೆ ಅನಾರೋಗ್ಯ ಉಂಟಾದ ಪರಿಣಾಮ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ನಿನ್ನೆ ರಾತ್ರಿ ಶಿಕ್ಷಕಿಗೆ ಕೊರೊನಾ ಪಾಸಿಟಿವ್ ದೃಢಪಡುತ್ತಿದ್ದಂತೆ ಕಡೋಲಿ ಗ್ರಾಮದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯನ್ನು ಬಂದ್ ಮಾಡಲಾಗಿದೆ.
ಕಡೋಲಿ ಪ್ರೌಢಶಾಲೆಯಲ್ಲಿ 8, 9, 10ನೇ ತರಗತಿ ಸೇರಿ ಒಟ್ಟು 182 ವಿದ್ಯಾರ್ಥಿಗಳು ಇದ್ದು, 11 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಯಾವುದೇ ರೀತಿ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮಕ್ಕಳು, ಪಾಲಕರಿಗೆ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ.
ಶಿಕ್ಷಕಿಗೆ ಕೊರೊನಾ ದೃಢಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿ.ಪಂ.ಉಪಾಧ್ಯಕ್ಷ ಅರುಣ್ ಕಟಾಂಬಳೆ, ಜಿ.ಪಂ.ಉಪಾಧ್ಯಕ್ಷ ಅರುಣ್ ಕಟಾಂಬಳೆ ಭೇಟಿ ನೀಡಿ, ಗ್ರಾ.ಪಂ.ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ಜನರ ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದ್ದರೆ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಜನ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ಶಾಲೆ, ಕಾಲೇಜು ಆರಂಭಿಸಲಾಗಿದೆ. ಅದೇ ರೀತಿ ವಿದ್ಯಾಗಮ ಕೂಡ ಆರಂಭಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹುಕ್ಕೇರಿಯಲ್ಲಿ ಇಬ್ಬರು ಹಾಗೂ ರಾಯಬಾಗನಲ್ಲಿ ಇಬ್ಬರು ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದೆ.
ಅದೇ ರೀತಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ನಗರದಲ್ಲಿ 4, ಗ್ರಾಮೀಣದಲ್ಲಿ 10, ರಾಮದುರ್ಗದಲ್ಲಿ 3, ಕಿತ್ತೂರಿನ 1 ಸೇರಿ ಒಟ್ಟು 18 ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಿಗೆಲ್ಲಾ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ. ಇವರ್ಯಾರು ಕೂಡ ಶಾಲೆಗೆ ಹೋಗಿರಲಿಲ್ಲಎಂದು ಜಿಲ್ಲಾಧಿಕಾರಿ ಹೇಳಿದರು.