(ಸಂಜೆವಾಣಿ ವಾರ್ತೆ)
ವಿಜಯಪುರ :ಜು.15: ಪ್ರಸಕ್ತ ಸಾಲಿನ ಸಾರ್ವತ್ರಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಿಎಸ್‍ಟಿ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮಾನ್ಯ ಉಪನಿರ್ದೇಶಕರಾದ ಎನ್. ಎಚ್. ನಾಗೂರ (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಇವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಪ್ರಾರಂಭವಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಯಲ್ಲಿ 10,15,20,25 ವರ್ಷಗಳಿಂದ ಕರ್ತವ್ಯ ನಿರ್ವಹಿಸಿರುವ ಪಿಎಸ್‍ಟಿ ಶಿಕ್ಷಕರಿಗೆ ತುಂಬಾ ಅನ್ಯಾಯವಾಗಿದೆ. ಪ್ರತಿಶತ 90 ರಷ್ಟು ಕರ್ತವ್ಯ ನಿರ್ವಹಿಸಿರುವ ಪಿಎಸ್‍ಟಿ ಶಿಕ್ಷಕರಿಗೆ ಕೇವಲ ಪ್ರತಿಶತ 10 ರಷ್ಟು ಖಾಲಿ ಹುದ್ದೆಗಳನ್ನು ತೋರಿಸಲಾಗಿದೆ. ಇನ್ನುಳಿದ ಎಲ್ಲಾ ಹುದ್ದೆಗಳಿಗೆ ಜಿಪಿಟಿ ಶಿಕ್ಷಕರಿಗೆ ಕಾಯ್ದಿರಿಸಲಾಗಿದೆ. ಇದರಿಂದ ಪಿಎಸ್‍ಟಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಸ್ಥಳಗಳು ಸಿಗದಂತಾಗಿದೆ.
ಪ್ರಸ್ತುತ ಬಹುತೇಕ ಶಾಲೆಗಳಲ್ಲಿ 6 ರಿಂದ 8ನೇ ತರಗತಿಗಳನ್ನು ಪಿಎಸ್‍ಟಿ ಶಿಕ್ಷಕರಿಂದಲೇ ಬೋಧಿಸಲಾಗುತ್ತದೆ. ಮತ್ತು ಈಗಿರುವ ಪಿಎಸ್‍ಟಿ ಶಿಕ್ಷಕರು ಬೇರೆ ಸ್ಥಳ ಆಯ್ಕೆ ಮಾಡಿಕೊಂಡಲ್ಲಿ ಆ ಹುದ್ದೆಗಳು ಜಿಪಿಟಿ ಹುದ್ದೆಗಳಾಗಿ ಮಾರ್ಪಾಡಾಗುತ್ತಿರುವುದು ಆತಂಕಕಾರಿಯಾಗಿದೆ. ಇಂದು ಬಹುತೇಕ ಪಿಎಸ್‍ಟಿ ಶಿಕ್ಷಕರಿಗೆ ವರ್ಗಾವಣೆ ಎಂಬುದು ಮರಿಚಿಕೆಯಾದಂತಾಗಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗುವಂತಹ ಆತಂಕ ಪಿಎಸ್‍ಟಿ ಶಿಕ್ಷರಿಗೆ ಕಾಡುತ್ತಿದೆ. ಈ ವರ್ಗಾವಣೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸೇವಾನಿರತ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಪಿಎಸ್‍ಟಿ ಸೂಕ್ತ ಸಿ &ಆರ್ ನಿಯಮವನ್ನು ತಿದ್ದುಪಡಿ ಮಾಡುವುದರ ಮೂಲಕ ಜಿಪಿಟಿ ಹುದ್ದೆಗಳಿಗೆ ವಿಲೀನ ಮಾಡಿಸಿ ಸ್ಥಳ ಹೊಂದಾಣಿಕೆ ಮಾಡಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಈರಣ್ಣ ಹೊಸಟ್ಟಿ , ಗೌರವ ಅಧ್ಯಕ್ಷರಾದ ಉಮೇಶ ಕೌಲಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಸ್. ಬೇವನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅರ್ಜುನ ಲಮಾಣಿ, ಎಚ್.ಬಿ. ಕೊಣದಿ, ಜುಬೇರ ಕೆರೂರ, ಎ.ಎನ್. ಚಿಮ್ಮಲಗಿ, ಆಯ್.ಬಿ.ಬಿರಾದಾರ, ಶ್ರೀಧರ ಪಾರಶೆಟ್ಟಿ, ಆನಂದ ಕೆಂಭಾವಿ, ತಿಪ್ಪಣ್ಣ ಜಂಬಗಿ, ನಿಜು ಮೇಲಿನಕೇರಿ, ಮಂಜುನಾಥ ಆರೆಶಂಕರ ಹಾಗೂ ಜಿಲ್ಲೆಯ ಪಿಎಸ್‍ಟಿ ಶಿಕ್ಷಕರು ಉಪಸ್ಥಿತರಿದ್ದರು.