
ಮಾನ್ವಿ,ಸೆ.೦೫-
ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಒಟ್ಟಾರೆಯಾಗಿ ೧೪೬೭ ಶಿಕ್ಷಕರ ಅವಶ್ಯಕತೆ ಇದೆ ಆದರೆ ಕಾರ್ಯನಿರ್ವಾಹಿಸು ತ್ತಿರುವವರ ಸಂಖ್ಯೆ ಕೇವಲ ೫೮೫ ಶಿಕ್ಷಕರು ಮಾತ್ರವಿದ್ದು ಇನ್ನುಳಿದಂತೆ ೮೮೨ ಶಿಕ್ಷಕರ ಕೊರತೆಯನ್ನು ಸರಿದೂಗಿಸಲು ವರ್ಗಾವಣೆಯಾಗಿರುವ ಶಿಕ್ಷಕರ ಆದೇಶವನ್ನು ಕೂಡಲೇ ರದ್ದು ಮಾಡುವಂತೆ ಆಗ್ರಹಿಸಿ ತಾಲೂಕ ದಲಿತ ಪರ ಸಂಘಟನೆಯಿಂದ ತಾಲೂಕ ಶಿಕ್ಷಣ ಇಲಾಖೆಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಬಸವರಾಜ ನಕ್ಕುಂದಿ ಹೇಳಿದರು.
ತಾಲೂಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತಾನಾಡಿದ ಅವರು ತಾಲೂಕಿನ ಒಟ್ಟು ೨೭ ಶಾಲೆಯಲ್ಲಿ ಶಿಕ್ಷಕರೇ ಇಲ್ಲವಾಗಿದೆ ಹಾಗೂ ತಾಲೂಕಿನಲ್ಲಿ ಒಟ್ಟು ೧೪೬೭ ಶಿಕ್ಷಕರ ಅವಶ್ಯಕತೆ ಇದ್ದರೂ ಕೂಡ ೫೮೫ ಶಿಕ್ಷಕರು ಮಾತ್ರ ಇದ್ದಾರೆ ಇಂತಹ ಸಮಯದಲ್ಲಿ ಪ್ರಾಥಮಿಕ ಶಾಲೆಯಿಂದ ೩೫೧ ಹಾಗೂ ಪ್ರೌಢಶಾಲೆಯಿಂದ ೬೧ ಶಿಕ್ಷಕರ ವರ್ಗಾವಣೆ ಮಾಡಿ ಆದೇಶವನ್ನು ನೀಡಿರುವ ವಲಯ ಶಿಕ್ಷಣ ಆಯುಕ್ತರಾಗಲಿ, ಜಿಲ್ಲಾ ಶಿಕ್ಷಣಾಧಿಕಾರಿಗಳಾಗಲಿ, ತಾಲೂಕ ಶಿಕ್ಷಣಾಧಿಕಾರಿಗಳಾಗಲಿ ಈ ವರ್ಗಾವಣೆ ಆದೇಶವನ್ನು ಕೂಡಲೇ ರದ್ದು ಮಾಡಿ ನಮ್ಮ ತಾಲೂಕಿನ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಕುರಿತು ಆಲೋಚನೆ ಮಾಡಬೇಕಾಗಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಕಲಿಯಿರಿ ಎನ್ನುವ ಸರ್ಕಾರದ ಆದೇಶವನ್ನು ಪಾಲಿಸುವ ಅಧಿಕಾರಿಗಳು ಅದೇ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಬೇಕು ಹಾಗೂ ಅಲ್ಲಿರುವ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎನ್ನುವ ಸಮಾನ್ಯ ವಿಷಯ ಅರ್ಥವಾಗದಿರುವದು ಮಾತ್ರ ದುರದೃಷ್ಟಕ ಸಂಗತಿಯಾಗಿದೆ ಎಂದರು.
ಸಂಪೂರ್ಣವಾಗಿ ಖಾಲಿಯಾಗಿರುವ ಒಟ್ಟು ೨೭ ಶಾಲೆಗಳಿಗೆ ಕೂಡಲೇ ನೂತನ ಶಿಕ್ಷಕರ ನೇಮಕವಾಗಬೇಕು ಹಾಗೂ ವರ್ಗಾವಣೆಯಾಗಿರುವ ಸ್ಥಾನಕ್ಕೆ ಬೇರೆ ಶಿಕ್ಷಕರು ಆಗಮಿಸುವವರೆಗೆ ಇವರ ವರ್ಗಾವಣೆಯನ್ನು ತಡೆಯಬೇಕು ಇದರಿಂದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ತಮ್ಮ ಸಹಕಾರವಾದಂತೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜೆ ಎಚ್ ದೇವರಾಜ, ನರಸಪ್ಪ ಜೂಕೂರು, ಹನುಮಂತ ಸೀಕಲ್, ಪರಶುರಾಮ ಬಾಗಲವಾಡ,ಕೆ ಎಂ ಬಾಷ, ವೆಂಕಟೇಶ ಕೆ, ಚಂದ್ರುನಾಯಕ, ಬಸವ ಸಂಗಾಪೂರ,ಹನುಮಂತ ನಾಯಕ,ನಾಗೇಶ ನಾಯಕ, ಸೇರಿದಂತೆ ಅನೇಕರು ಇದ್ದರು.