ಶಿಕ್ಷಕರ ವರ್ಗಾವಣೆಯಲ್ಲಿ ಆಗುತ್ತಿರುವ ತೊಂದರೆಯನ್ನು ಪರಿಹರಿಸಲು ಆಗ್ರಹ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.29: ಜಿಲ್ಲಾ ಶಿಕ್ಷಕರಿಗೆ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಆಗುತ್ತಿರುವ ತೊಂದರೆಯನ್ನು ಪರಿಹರಿಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಮನವಿ ಮಾಡಿದೆ.
ಉಪನಿರ್ದೇಶಕರ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಈ ಕುರಿತಂತೆ ಮನವಿಯನ್ನು ಸಲ್ಲಿಸಿದ್ದು ವರ್ಗಾವಣೆಯಲ್ಲಿ ಪ್ರಮುಖ ಮೂರು ಅಂಶಗಳನ್ನು ಪರಿಗಣಿಸುವಂತೆ ವಿನಂತಿಸಲಾಗಿದೆ.
ಶೇಕಡ 25ಕ್ಕಿಂತ ಹೆಚ್ಚು ಖಾಲಿಯಿರುವ ತಾಲೂಕುಗಳಿಂದ ವರ್ಗಾವಣೆ ಇಲ್ಲ ಎಂಬ ಅಂಶ ಘಟಕದ ಒಳಗಿನ ವರ್ಗಾವಣೆಗೆ ಅನ್ವಯಿಸಬಾರದೆಂದು ಕೋರುತ್ತಾ ಈ ಹಿಂದೆ ಶೇಕಡ 25ಕ್ಕಿಂತ ಹೆಚ್ಚು ಖಾಲಿಯಿರುವ ತಾಲೂಕುಗಳಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸಿದಂತೆ ಈಗಲೂ ಮುಕ್ತವಾಗಿ ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.
ಒಟ್ಟಾರೆಯಾಗಿ ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪಿ.ಎಸ್.ಟಿಯಾಗಿರಬಹುದು ಜಿ.ಓ.ಟಿಯಾಗಿರುವ ಎಲ್ಲಾ ಖಾಲಿ ಹುದ್ದೆಗಳಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು, ಹಾಗೂ ಒಂದರಿಂದ ಐದು ಮತ್ತು ಆರರಿಂದ ಎಂಟು ವೃಂದಗಳನ್ನು ಸೇರಿಸಿ ಖಾಲಿ ಹುದ್ದೆಗಳನ್ನು ಪರಿಗಣಿಸುತ್ತಿದ್ದು ವೃಂದಬಲದ ಆಧಾರದ ಮೇಲೆ ಒಂದರಿಂದ ಐದು ವೃಂದಕ್ಕೆ ಸಂಬಂಧಿಸಿದ ಖಾಲಿ ಹುದ್ದೆಗಳನ್ನು ಬೇರೆ ಪರಿಗಣಿಸಬೇಕು, ಆರರಿಂದ ಎಂಟು ವೃಂದಕ್ಕೆ ಸಂಬಂಧಿಸಿದಂತೆ ಖಾಲಿ ಹುದ್ದೆಗಳನ್ನು ಬೇರೆ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅದ್ಯಕ್ಷ ಸಿ.ನಿಂಗಪ್ಪ, ಜೆ.ಗೀತಾ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.