ಶಿಕ್ಷಕರ ವರ್ಗಾವಣೆಗೆ ಮಾರ್ಗಸೂಚಿ

ಬೆಂಗಳೂರು,ನ.೧೩- ಶಿಕ್ಷಕರ ಸಾಮಾನ್ಯ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ.
ಈ ಸಂಬಂಧ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಿಕ್ಷಕರು ಮತ್ತು ಪ್ರೌಢಶಾಲಾ, ತತ್ಸಮಾನ ವೃಂದದ ಶಿಕ್ಷಕರು, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಪ್ರಸಕ್ತ ಸಾಲಿನ ಸಾಮಾನ್ಯ ವರ್ಗಾವಣೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬು ಕುಮಾರ್ ಮಾರ್ಗಸೂಚಿಯ ಜತೆಗೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಶೈಕ್ಷಣಿಕ ವರ್ಷದ ಆರಂಭಕ್ಕೆ ಮುಂಚಿತವಾಗಿ ವರ್ಗಾವಣೆಗಳನ್ನು ಮಾಡಬೇಕಾಗಿತ್ತು. ಆದರೆ, ರಾಜ್ಯದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ವರ್ಗಾವಣೆ ಪ್ರಕ್ರಿಯೆಯನ್ನು ಉದ್ದೇಶಿತ ಕಾಲಮಿತಿಯೊಳಗೆ ಸಾಧ್ಯವಾಗಿಲ್ಲ.
ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಯನ್ನು ಶಿಕ್ಷಕರ ಹಿತದೃಷ್ಟಿಯಿಂದ ನಿರ್ವಹಿಸಲು ತೀರ್ಮಾನಿಸಲಾಗಿದೆ. ವಲಯ ವರ್ಗಾವಣೆ ಹಾಗೂ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹಂಚಿಕೆಯನ್ನು ಕೈಬಿಡಲಾಗಿದೆ.
ಈಗಾಗಲೆ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ೧೭-೧೧-೨೦೨೦ ರಿಂದ ಕಡ್ಡಾಯ, ಹೆಚ್ಚುವರಿಯಾಗಿ ತಾಲ್ಲೂಕು ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಶಿಕ್ಷಕರ ಪಟ್ಟಿ ಪ್ರಕಟವಾಗಲಿದೆ.
ನ. ೨೦ ರಿಂದ ೨೩ರವರೆಗೆ ಮೇಲ್ಕಂಡ ಪ್ರಕಟಿಸಲಾಗಿರುವ ಪಟ್ಟಿಗೆ ಶಿಕ್ಷಕರಿಂದ ಆಕ್ಷೇಪಣೆಗಳು ಸಲ್ಲಿಕೆಯಾದರೆ ಅವುಗಳನ್ನು ಪರಿಶೀಲಿಸಿ ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನ. ೨೪ ರಿಂದ ೩೦ರವರೆಗೆ ಪಟ್ಟಿಯಲ್ಲಿ ಪ್ರಕಟವಾದ ಆಸಕ್ತ ಶಿಕ್ಷಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿ. ೧ ರಿಂದ ಡಿ. ೫ರವರೆಗೆ ತಂತ್ರಾಂಶದಲ್ಲಿ ಅರ್ಜಿಗಳನ್ನು ಅಂತಿದಗೊಳಿಸಲಾಗಿದ್ದು, ಡಿ. ೧೪ ರಿಂದ ಅಂತಿಮ ಕೌನ್ಸಲಿಂಗ್ ಅರ್ಹತಾ ಪಟ್ಟಿ ಪ್ರಕಟವಾಗಲಿದೆ.
ಡಿ. ೧೬ ರಿಂದ ೧೭ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗೆ ಉಪ ನಿರ್ದೇಶಕರ ಕಚೇರಿಯಲ್ಲಿ ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದೆ.