ಶಿಕ್ಷಕರ ಮೇಲೆ ಕ್ರಮಕ್ಕೆ ಆಗ್ರಹ

ರಾಯಚೂರು,ಮಾ.೧೫- ನಗರದ ಜಹೀರಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಾಲಾ ಶಿಕ್ಷಕರು ಬೆಳಿಗ್ಗೆ ಪ್ರಾರ್ಥನೆ ಸಮಯಕ್ಕೆ ಬಾರದೇ ಮನಸ್ಸು ಇಚ್ಛೆಯಂತೆ ಬರುತ್ತಿರುವ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಮೂಲನಿವಾಸಿ ಅಂಬೇಡ್ಕರ್ ಸಂಘ ಜಿಲ್ಲಾ ಸಮಿತಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ನಗರದ ಜಹೀರಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಕರು ಬೆಳಿಗ್ಗೆ ಪ್ರಾರ್ಥನೆ ಸಮಯಕ್ಕೆ ಬಾರದೇ ತಮ್ಮ ಮನಸ್ಸಿಗೆ ಬಂದಂತೆ ಶಾಲೆಗೆ ಬರುತ್ತಿದ್ದು, ಮತ್ತು ವಿದ್ಯಾರ್ಥಿಗಳ ದಾಖಲಾತಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹಾಗೂ ದಿನ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿದೆ ಎಂದು ಆರೋಪಿಸಿದರು.
ಶಾಲಾ ಆಡಳಿತ ಸಿಬ್ಬಂದಿ ಮಾತ್ರ ಇದನ್ನು ಕಂಡು ಕಾಣದಂತೆ ನಮಗೆ ಪ್ರತಿ ತಿಂಗಳ ಸಂಬಳ ಬರುತ್ತಿದೆಂಬ ಹಂಗುನಲ್ಲಿದ್ದು, ಶಾಲೆಗೆ ಮಕ್ಕಳ ಬರುತ್ತಿಲ್ಲವೇಕೆ? ಎಂದು ಮಕ್ಕಳ ಪಾಲಕರು ಪ್ರಶ್ನಿಸಿದರೆ ಇದಕ್ಕೆ ಹಾರಿಕೆ ಉತ್ತರ ಹಾಗೂ ವಿಳಂಬದೋರಣೆ ಅನುಸರಿಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ಮತ್ತು ನಿರ್ಲಕ್ಷ್ಯದೋರಣೆ ಅನುಸರಿಸಿರುತ್ತಾರೆ. ಇದರಿಂದ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಮೊರೆ ಹೋಗುತ್ತಿದ್ದಾರೆ ಎಂದು ದೂರಿದರು. ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.