ಶಿಕ್ಷಕರ ಭವನ ಶೀಘ್ರ ನಿರ್ಮಾಣಕ್ಕೆ ಒತ್ತಾಯ

ಕೋಲಾರ ಸೆ,೫:ಅನೇಕ ವರ್ಷಗಳಿಂದ ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ಕನಸಾಗಿಯೇ ಉಳಿದಿರುವ ಗುರುಭವನ ನಿರ್ಮಾಣ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್. ಶ್ರೀನಾಥ್ ಒತ್ತಾಯಿಸಿದರು.
ನಗರದ ರೋಟರಿ ಸೆಂಟ್ರಲ್ ಭವನದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘ, ರೋಟರಿ ಸೆಂಟ್ರಲ್ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಡಾ.ರಾಧಾಕೃಷ್ಣನ್ ರವರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡುತ್ತಿದ್ದರು.
ಅನೇಕ ವರ್ಷಗಳ ಕನಸಾಗಿರುವ ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ಭವನ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಆರಂಭವಾಗಬೇಕು. ಶಿಕ್ಷಕರು ತಮ್ಮ ಸಭೆ ಸಮಾರಂಭಗಳು, ಶಿಕ್ಷಕರ ದಿನಾಚರಣೆಯೂ ಸೇರಿದಂತೆ ಶಿಕ್ಷಕರ ಭವನದಲ್ಲೇ ಆಗಬೇಕು ಎಂಬ ಕನಸಿಗೆ ಜಿಲ್ಲಾಡಳಿತ ಸ್ಪಂಧಿಸಿಬೇಕು ಎಂದು ಅವರು ಕೋರಿದರು.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ಸತತ ಅಧ್ಯಯನಶೀಲರಾಗಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಶ್ರಮಿಸಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಬಾಲಾಜಿ ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬುದು ಅದ್ಭುತ ಜೀವನ ಸಂದೇಶ. ತಂದೆ, ತಾಯಿಯಷ್ಟೇ ಪವಿತ್ರ ಸ್ಥಾನ ಗುರುವಿಗೂ ಇದೆ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆಗ ಬದುಕು ಇನ್ನೂ ಚೆಂದ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ಪ್ರತಿಯೊಬ್ಬರ ಬಾಳಿನಲ್ಲೂ ಗುರುಗಳ ಪಾತ್ರ ಬಹಳ ಹಿರಿದು. ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯರು ಕಲಿಸುವ ಪಾಠ, ನೀಡುವ ಮಾರ್ಗದರ್ಶನ ಸುಂದರ ಬದುಕಿಗೆ ಬುನಾದಿ. ಹೀಗಾಗಿ, ನಮ್ಮ ಭವಿಷ್ಯದ ಜೀವನಕ್ಕೊಂದು ಸುಂದರ ಅಡಿಪಾಯ ಹಾಕಿಕೊಡುವ ಶಿಕ್ಷಕರಿಗೆ ಸದಾ ಋಣಿಯಾಗಿರುವುದು ಕೂಡಾ ನಮ್ಮ ಕರ್ತವ್ಯ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಸಂಯೋಜಕರಾಗಿ ಆಯ್ಕೆಯಾಗಿರುವ ಕೆ.ಶ್ರೀನಿವಾಸ್ ಮತ್ತು ಎನ್.ನಂಜುಂಡಗೌಡ ರವರನ್ನು ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್‌ರವರು ಸನ್ಮಾನಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ಕಾರ್ಯದರ್ಶಿ ವಿ.ಸುಧಾಕರ್, ಶಿಕ್ಷಕರ ಸಂಘದ ಮುಖಂಡರು ಉಪಸ್ಥಿತರಿದ್ದರು