ಶಿಕ್ಷಕರ ನೊವು ನಲಿವುಗಳಿಗೆ ಸ್ಪಂದಿಸಲು ಸಂಘ ಅವಶ್ಯಕ: ಬಳೂಂಡಗಿ

ಚಿತ್ತಾಪುರ:ಜ.7: ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಲು ಸಂಘಗಳು ಅವಶ್ಯಕವಾಗಿವೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಹೇಳಿದರು.

ಪಟ್ಟಣದ ಸರ್ಕಾರಿ ಕನ್ಯಾ ಫ್ರೌಡಶಾಲೆಯಲ್ಲಿ ಅವಿಭಜಿತ ಚಿತ್ತಾಪುರ ತಾಲೂಕಿನ ಚಿತ್ತಾಪುರ, ಶಹಬಾದ, ಕಾಳಗಿ ತಾಲೂಕು ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಅಯ್ಕೆ ಪ್ರಮಾಣ ಪತ್ರ ವಿತರಣೆ ಹಾಗೂ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು ಮೂರನೇ ಅಂಗವಾದ ಕಾರ್ಯಂಗವು ಸರ್ಕಾರದ ಅವಿಭಾಜ ಅಂಗವಾಗಿದ್ದು ಇಲ್ಲಿ ಕೂಡಾ ಸರ್ಕಾರಿ ನೌಕರರು ತಮ್ಮ ಸೇವೆಯನ್ನು ನಿಸ್ವಾರ್ಥಭಾವನೆಯಿಂದ ಸಲ್ಲಿಸುತ್ತಾರೆ. ಇಂತಹ ಸಮಯದಲ್ಲಿ ಕೆಲವು ಕಡೆ ಅವರಿಗೆ ತೊಂದರೆಗಳು ಎದುರಾಗುವದು ಸಹಜ ಇಂತಹ ಸಮಯದಲ್ಲಿ ಸಂಘಗಳು ಅವರ ನೊವಿಗೆ ಸ್ಪಂಧಿಸಿ ಪರಿಹಾರ ಕಲ್ಪಿಸಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಾ ಬರುತ್ತಿದೆ. ಇತ್ತಿಚೆಗೆ ಕೊವಿಡ್ ಹಿನ್ನಲೆಯಲ್ಲಿ ನೌಕರರು ಅನೇಕ ತೊಂದರೆಗಳನ್ನು ಅನುಭವಿಸಿದ್ದೇವೆ ವೇತನ ಸೇರಿದಂತೆ ಹಲವಾರು ಸಮಸ್ಯೆಗಳನ್ನು ತಾಲೂಕಿನಲ್ಲಿ ಶಿಕ್ಷಕರು ಅನುಭವಿಸುತ್ತಿದ್ದು ಈ ಕುರಿತಾಗಿ ಶಿಕ್ಷಕರ ಸಂಘವು 14 ದಿನಗಳಲ್ಲಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಗುವದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನುರ ಮಾತನಾಡಿ ಶಿಕ್ಷಣ ಕ್ಷೇತ್ರವು ಪ್ರಭುದ್ದರನ್ನು ಸೃಷ್ಟಿ ಮಾಡುವ ಜವಬ್ದಾರಿ ಹೊಂದಿದೆ ನಾವೇಲ್ಲರೂ ಕೂಡಿ ಸೇವೆ ಸಲ್ಲಿಸುತ್ತಿವೆ. ತಾಲೂಕಿನ ಶಾಸಕರು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಸೌಲಭ್ಯವನ್ನು ಒದಗಿಸಿದ್ದರೂ ತಾಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿದಿರುವದು ನೊವಿನ ವಿಷಯವಾಗಿದೆ. ಇದರ ಮಧ್ಯೆ ಕೊರೊನಾ ಹಾವಳಿಯಿಂದ ಶಿಕ್ಷಣ ಕ್ಷೇತ್ರದಿಂದ ಮಕ್ಕಳು ದೂರ ಉಳಿದಿದ್ದು ಇದು ಕೂಡಾ ಅವರ ಅಭ್ಯಾಸಕ್ಕೆ ತೊಂದರೆಯಾಗಿದೆ. ಇಗ ಸರ್ಕಾರವು ಶಾಲೆಗಳ ಆರಂಭಕ್ಕೆ ಮುನ್ನುಡಿ ಬರೆದಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಫಲಿತಾಂಶ ಹೆಚ್ಚಳಕ್ಕೆ ಎಲ್ಲರೂ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಚಿತ್ತಾಪುರ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಶಹಬಾದ ಅಧ್ಯಕ್ಷ ಶಿವಪುತ್ರ ಕರಣಿಕ, ಕಾಳಗಿ ಉಪಾಧ್ಯಕ್ಷ ಗಂಗಾಧರ ಸಾವಳಗಿ ಮಾತನಾಡಿದರು.
ರೇವಣಸಿದ್ದಪ್ಪ ರೊಣದ, ದೇವಿಂದ್ರರೆಡ್ಡಿ ದುಗನೂರ, ಶರಣಗೌಡ ಪಾಟೀಲ್, ಪ್ರಮೊದಕುಮಾರ, ರಮೇಶ ಹಳಂಗೆ, ಅಣವೀರಪ್ಪ ನಾಗೂರೆ, ಶಿವಪುತ್ರ ಕೊಣಿನ ಶ್ರೀಮಂತ ವೇದಿಕೆಯಲ್ಲಿದ್ದರು.
ಸ.ಶಿ ಕಸ್ತೂರಿಬಾಯಿ ಪ್ರಾಥನೆ ಗೀತೆ ಹಾಡಿದರು, ಮಹ್ಮದ ಸಲಿಂ ನಿರೂಪಿಸಿದರು. ಕಿಶನ್ ರಾಠೋಡ ಸ್ವಾಗತಿಸಿದರು.


ಸಭೆಯಲ್ಲಿ ಭುಗಿಲೆದ್ದ ಅಸಮಾಧಾನ:
ಶಿಕ್ಷಕರ ಅಭಿನಂದನೆ ಸಮಾರಂಭದಲ್ಲಿ ಚಿತ್ತಾಪುರ ವಲಯದವರಿಗೆ ಅದ್ಯತೆ ನೀಡಿ ಶಹಬಾದ ಮತ್ತು ಕಾಳಗಿ ತಾಲೂಕಿನ ಪದಾಧಿಕಾರಿಗಳನ್ನು ಕಡೆಗಣಿಸಿದ್ದಿರಿ. ಹಾಗಿದ್ದರೆ ನಮಗೇಕೆ ಇಲ್ಲಿಗೆ ಕರೆಸಿದ್ದಿರಿ. ನಾವು ನಮ್ಮ ಕಾರ್ಯಕ್ರಮವನ್ನು ನಮ್ಮ ತಾಲೂಕಿನಲ್ಲಿಯೇ ಮಾಡಿಕೊಳ್ಳುತ್ತಿದ್ದೇವು ಎಂದು ಸಭೆಯಲ್ಲಿ ಶಹಬಾದ ವಲಯ ಅಧ್ಯಕ್ಷ ಶಿವಪುತ್ರ ಕರಣಿಕ ಮತ್ತು ಕಾಳಗಿ ವಲಯ ಉಪಾಧ್ಯಕ್ಷ ಗಂಗಾಧರ ಸಾವಳಗಿ ಆಕ್ರೋಶ ವ್ಯಕ್ತಪಡಿಸಿದರು.