
ಕಲಬುರಗಿ:ಮಾ.9: ಕರ್ನಾಟಕ ರಾಜ್ಯದ ಸುಮಾರು 15,000 ಶಿಕ್ಷಕರ ನೇಮಕಾತಿಯನ್ನು ರಾಜ್ಯ ಸರ್ಕಾರ ಮಾಡಿಕೊಂಡಿರುವುದು ಸ್ವಾಗತಾರ್ಹ. ಆದಾಗ್ಯೂ, ಕರ್ನಾಟಕ ರಾಜ್ಯದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮದುವೆಯಾದ ಅಭ್ಯರ್ಥಿಗಳಿಗೆ ಪತಿಯ ಆದಾಯ ಪ್ರಮಾಣಪತ್ರ ನೀಡದ ಕಾರಣ ನೇಮಕಾತಿ ಆಯ್ಕೆ ಪಟ್ಟಿಯಲ್ಲಿ ಹೆಸರು ಸರ್ಕಾರ ಕೈಬಿಟ್ಟಿದ್ದು, ಕೂಡಲೇ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಜಿಪಿಎಸ್‍ಟಿಆರ್ ವಂಚಿತ ಅಭ್ಯರ್ಥಿಗಳ ಹೋರಾಟ ಸಮಿತಿ ಸಂಯೋಜಿತ ಅಖಿಲ ಭಾರತ ಯುವ ಜನ ಒಕ್ಕೂಟ ಎಐವೈಎಫ್ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ನ್ಯಾಯವಾದಿ ಹಣಮಂತರಾಯ್ ಎಸ್. ಅಟ್ಟೂರ್ ಅವರು ಒತ್ತಾಯಿಸಿದ್ದಾರೆ.
ಆಡಳಿತ ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳಿಗೆ ವಂಚಿತ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಂಚಿತ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋದಾಗ ತೀವ್ರಗತಿಯಲ್ಲಿ ನ್ಯಾಯ ದೊರಕಿಸಿಕೊಟ್ಟಿದ್ದು ಸಂತೋಷದ ಸಂಗತಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸುಮಾರು 2500 ಅಭ್ಯರ್ಥಿಗಳಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ 189 ಅಭ್ಯರ್ಥಿಗಳಿಗೆ ಅನ್ಯಾಯವಾಗಿತ್ತು. ನೇಮಕಾತಿ ವಿಷಯದ ಕುರಿತು ಸರ್ವೋಚ್ಛ ನ್ಯಾಯಾಲಯವೂ ಸಹ ಹಲವಾರು ಪ್ರಕರಣಗಳಲ್ಲಿ ಮದುವೆಯಾದ ಮಹಿಳೆಯರು ತಾಯಿ, ತಂದೆಯ ಆದಾಯ ಹಾಗೂ ಜಾತಿ ಪ್ರಮಾಣಪತ್ರ ನೀಡಿದರೆ ಸಾಕು, ಪತಿಯ ಆದಾಯ ಪ್ರಮಾಣಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ತೀರ್ಪು ನೀಡಿತ್ತು. ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಅರ್ಹತೆಯಿರುವ ಅಭ್ಯರ್ಥಿಗಳಿಗೆ ಸರ್ಕಾರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನ್ಯಾಯಾಲಯ ತ್ವರಿತ ಗತಿಯಲ್ಲಿ ವಂಚಿತ ಅಭ್ಯರ್ಥಿಗಳ ಪರವಾಗಿ ನ್ಯಾಯ ದೊರಕಿಸಿಕೊಟ್ಟಿದ್ದು ಸ್ವಾಗತಾರ್ಹ. ಕಲ್ಯಾಣ ಕರ್ನಾಟಕ ಭಾಗದ ಹಲವಾರು ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗ ಯುವಕರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.