ಶಿಕ್ಷಕರ ನೇಮಕಾತಿ ಗುತ್ತಿಗೆ ಆದೇಶ ರದ್ದು

ಬೆಂಗಳೂರು, ಮೇ.೨೯-ಬಿಬಿಎಂಪಿ ಶಾಲಾ- ಕಾಲೇಜು ಶಿಕ್ಷಕರ ನೇಮಕಾತಿ ಜವಾಬ್ದಾರಿಯನ್ನು ಸೆಕ್ಯುರಿಟಿ ಕಂಪನಿಗೆ ಗುತ್ತಿಗೆ ನೀಡಲು ಮುಂದಾಗಿದ್ದ ಆದೇಶವನ್ನು ಬಿಬಿಎಂಪಿ ರದ್ದು ಮಾಡಿದೆ.ಮುಂಬರುವ ಶೈಕ್ಷಣಿಕ ವರ್ಷದೊಳಗೆ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡುವಂತೆ ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಲು ಬಿಬಿಎಂಪಿ ಪಾಲಿಕೆ ಮುಂದಾಗಿತ್ತು. ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿತ್ತು.ಜತೆಗೆ ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಹ ಅಸಮಾಧಾನ ಹೊರಹಾಕಿ ಬಿಬಿಎಂಪಿ ಶಿಕ್ಷಣ ಸಂಸ್ಥೆಯನ್ನು ಸೆಕ್ಯುರಿಟಿ ಏಜೆನ್ಸಿಗೆ ಮಾರಾಟ ಮಾಡಲು ಮುಂದಾಗಿದೆಯೇ ಎಂದು ಪ್ರಶ್ನಿಸಿದ್ದರು. ಇದಾದ ಬಳಿಕ ಪಾಲಿಕೆಯು ಆದೇಶವನ್ನು ವಾಪಸ್ ಪಡೆದು, ಸೆಕ್ಯುರಿಟಿ ಏಜೆನ್ಸಿಗಳಿಗೆ ನೀಡಿದ್ದ ಟೆಂಡರ್ ಆದೇಶವನ್ನು ರದ್ದುಪಡಿಸಿದೆ.ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಹೊರಗುತ್ತಿಗೆ ಶಿಕ್ಷಕರ ನೇಮಕಾತಿ ಜವಾಬ್ದಾರಿಯನ್ನು ಸೆಕ್ಯುರಿಟಿ ಏಜೆನ್ಸಿಗೆ ನೀಡಲು ಬಿಬಿಎಂಪಿ ಮುಂದಾಗಿತ್ತು. ಪಾಲಿಕೆ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ೭೦೦ ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧಾರ ಮಾಡಿತ್ತು.ಸೆಕ್ಯುರಿಟಿ ಕಂಪನಿಯಿಂದ ಶಿಕ್ಷಕರ ನೇಮಕ ಆದರೆ ಗುಣಮಟ್ಟದ ಶಿಕ್ಷಣ ಸಿಗುತ್ತಾ ಎಂದು ಜನರು ಪ್ರಶ್ನಿಸಿದ್ದರು.