ಶಿಕ್ಷಕರ ನೇಮಕಾತಿಯಲ್ಲಿ ಪದವಿ ಅಂಕಗಳನ್ನು ಕೈಬಿಡಲು ಆಗ್ರಹ

ಕಲಬುರಗಿ,ನ.13: ಹಿರಿಯ ಪರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಪದವಿ ಅಂಕಗಳನ್ನು ಕೈಬಿಟ್ಟು ಟಿಇಟಿ ಮತ್ತು ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಭೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಧರ್ಮಣ್ಣ ಸಿ. ಕೋಣೆಕರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005ರ ಹಿಂದಿನ ವಿದ್ಯಾರ್ಥಿಗಳು ಒಟ್ಟಾರೆ ಒಂದು ವಿಷಯಕ್ಕೆ 100 ಅಂಕವಿದ್ದು, ಆ ಸಮಯದಲ್ಲಿ ಪ್ರಾಯೋಗಿಕ ಅಂಕವಿರಲಿಲ್ಲ. ನೂರಕ್ಕೆ ನೂರು ಅಂಕ ಲಿಖಿತವಾಗಿ ಬರೆಯಬೇಕಿತ್ತು. ಅಲ್ಲದೇ ಎಲ್ಲ ವಿಷಯಗಳು ಒಂದು ವರ್ಷದವರೆಗೆ ಅಧ್ಯಯನ ಮಾಡಬೇಕಿತ್ತು. ವರ್ಷಕ್ಕೆ ಒಂದು ಬಾರಿ ಪರೀಕ್ಷೆ ಇರುತ್ತಿತ್ತು. ಇದರಿಂದ ನಮಗೆ ಹೆಚ್ಚಿನ ಹೊರೆಯಾಗುತ್ತಿತ್ತು. ಹೀಗಾಗಿ ಆಗಿನ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಆ ಸಂದರ್ಭದಲ್ಲಿ ಎಷ್ಟೇ ಹರಸಾಹಸ ಮಾಡಿದರೂ ಶೇಕಡಾ 60ರಷ್ಟು ಅಂಕ ಪಡೆಯಲು ಅಸಾಧ್ಯವಾಗುತ್ತಿತ್ತು. 2006ರಿಂದ ಸೆಮಿಸ್ಟರ್ ಪದ್ದತಿ ಜಾರಿಗೆ ಬಂದಿರುವುದರಿಂದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇರುವ ವಿಷಯದಲ್ಲಿ 6 ತಿಂಗಳಿಗೊಮ್ಮೆ ಪರೀಕ್ಷೆ (ವರ್ಷಕ್ಕೆ ಎರಡು ಬಾರಿ) ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕಡಿಮೆ ವಿಷಯ ಇರುವುದರಿಂದ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತಿದೆ. ಅಲ್ಲದೇ ಅವರಿಗೆ 80 ಅಂಕ (ಥೇರಿ) ಇದ್ದು 20 ಅಂಕ ಆಂತರಿಕ ಇದ್ದು, ಈ ಅಂಕಗಳು 20ಕ್ಕೆ 20 ಅಂಕ ಪಡೆದುಕೊಳ್ಳಲು ಅವರಿಗೆ ಅವಕಾಶವಿದೆ. ಅಲ್ಲದೇ ಥೇರಿಯಲ್ಲಿ 80 ಅಂಕಕ್ಕೆ 60 ಅಂಕ ಪಡೆದುಕೊಂಡರು. ಪ್ರಾಯೋಗಿಕ 20 ಅಂಕದಲ್ಲಿ 18-19 ಅಂಕ ಹಿಡಿದರೆ ಒಟ್ಟು ಸರಾಸರಿ 80ರಷ್ಟು ಅಂಕ ಸಾಮಾನ್ಯವಾಗಿ ಸಿಗುತ್ತಿವೆ. ಹೀಗಾಗಿ ಅವರ ಜೊತೆ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು ಪೈಪೋಟಿ ಮಾಡಲು ಅಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ ಮೇ 21 ಮತ್ತು 22ರಂದು ನಡೆದ ಜಿಪಿಎಸ್‍ಟಿಆರ್ ಪರೀಕ್ಷೆಯಲ್ಲಿ ಸೆಮೆಸ್ಟರ್ ವಿದ್ಯಾರ್ಥಿಗಳು ಪದವಿಯಲ್ಲಿ ಪಡೆದುಕೊಂಡ ಅಂಕ 80-90 ಅಂಕ ಪಡೆದುಕೊಂಡಿದ್ದು, ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು ಸಿಇಟಿಯಲ್ಲಿ ಹೆಚ್ಚಿನ ಅಂಕ ಪಡೆದುಕೊಂಡಿದ್ದರು ಸಹ ಪದವಿ ಅಂಕ ಕಡಿಮೆ ಇದ್ದ ಕಾರಣ ಸೆಮಿಸ್ಟರ್ ವಿದ್ಯಾರ್ಥಿಗಳ ಪದವಿ ಅಂಕ ಹೆಚ್ಚಿರುವುದರಿಂದ ಸಿಇಟಿಯಲ್ಲಿ ಕಡಿಮೆ ಅಂಕ ಇದ್ದರೂ ಸಹ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಹೀಗಾಗಿ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ವಿದ್ಯಾರ್ಥಿಗಳ ಜೊತೆ ಸ್ಪರ್ಧೆ ಮಾಡಲು ಅಜಗಜಾಂತರ ವ್ಯತ್ಯಾಸವಿರುವುದರಿಂದ ಸೆಮಿಸ್ಟರ್ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಇದರಿಂದ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಅವರು ಆರೋಪಿಸಿದರು
ಅದಲ್ಲದೇ ವಯಸ್ಸು ಮೀರುತ್ತಿರುವುದರಿಂದ ಮತ್ತು ಮಹಾಮಾರಿ ಕೊರೋನಾ ರೋಗ ಬಂದಿರುವುದರಿಂದ ಎರಡು ವರ್ಷ ಲಾಕ್‍ಡೌನ್ ಇದ್ದ ಕಾರಣ ನಾವು ಆರ್ಥಿಕ ಪರಿಸ್ಥಿತಿಯಲ್ಲಿ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ನಮ್ಮ ಜೀವನ ನಡೆಸಲು ಅಸಾಧ್ಯವಾಗುತ್ತಿದೆ. ನಾವು ಶಿಕ್ಷಕರಾಗುತ್ತೇವೆ ಎಂದು ಸಾಕಷ್ಟು ಆಸೆ ಮತ್ತು ನಿರೀಕ್ಷೆ ಹೊಂದಿದ್ದೇವೆ. ಆದಾಗ್ಯೂ, ಈಗ ನಮ್ಮ ಕನಸು ನುಚ್ಚು ನೂರಾಗುತ್ತಿದೆ. ಆದ್ದರಿಂದ ಶಿಕ್ಷಕರ ನೇಮಕಾತಿಯಲ್ಲಿ ಪದವಿ ಅಂಕಗಳನ್ನು ಕೈಬಿಟ್ಟು ಟಿಇಟಿ ಮತ್ತು ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟು ಅವರ ಮುಂದಿನ ಭವಿಷ್ಯ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಅನ್ಯಾಯವನ್ನು ಸರಿಪಡಿಸದೇ ಹೋದಲ್ಲಿ ಹಂತ, ಹಂತವಾಗಿ ಹೋರಾಟ ರೂಪಿಸುತ್ತೇವೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಗೀತಾ ನಾಲವಾರ್, ರಂಜಿತಾ ಕಲಬುರ್ಗಿ, ಶಿವಾನಂದ್ ವಾಲೀಕಾರ್, ಸಾತಪ್ಪ ಮುಂತಾದವರು ಉಪಸ್ಥಿತರಿದ್ದರು.