ಶಿಕ್ಷಕರ ದಿನಾಚರಣೆ

ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿಯೂ ಶಿಕ್ಷಕ ದಿನಾಚರಣೆಯನ್ನು ಆನ್‌ ಲೈನ್‌ ಮೂಲಕವೇ ಶುಭಾ ಕೋರುವ ಮೂಲಕ ಆಚರಿಸುವಂತಾಗಿರುವುದು ವಿಪರ್ಯಾಸ. ಸೆ. 5ರಂದು ಶಾಲೆಗಳಲ್ಲಿನ ವಾತಾವರಣ ಒಂದಷ್ಟು ಬದಲಾಗುತ್ತದೆ. ಮಕ್ಕಳೊಂದಿಗೆ ಶಿಕ್ಷಕರೂ ಮಕ್ಕಳಾಗುತ್ತಾರೆ. ಶಿಕ್ಷಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಕ್ಕಳೂ ಶಿಕ್ಷಕರಿಗೆ ವಿವಿಧ ರೀತಿಯಲ್ಲಿ ಗೌರವ ಅರ್ಪಿಸುತ್ತಾರೆ. ಆದರೆ ಈ ಬಾರಿ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಸಾಧ್ಯವಾಗುತ್ತಿಲ್ಲ. ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರಿಗೆ ತಮ್ಮ ದಿನವನ್ನು ಸಂಭ್ರಮಿಸುವ ಅವಕಾಶವೂ ಸಿಗುತ್ತಿಲ್ಲ. ಆದರೂ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಸೋಷಿಯಲ್‌ ಮಿಡಿಯಾ ಸೇರಿದಂತೆ ಹಲವೆಡೆ ಭಿನ್ನವಾಗಿ ಶುಭ ಕೋರುವ ಮೂಲಕ ಈ ‘ಶಿಕ್ಷಕರ ದಿನಾಚರಣೆ’ ಆಚರಿಸಿದ್ದಾರೆ.

ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮೌಲ್ಯಯುತ ಸಮಾಜ ರೂಪಿಸುವ ಶಿಕ್ಷಕರಿಗೆ ತಮ್ಮದೇ ಆದ ದಿನವೊಂದನ್ನು ಸಂಭ್ರಮಿಸುವ ಅವಕಾಶ ಇದು. ಶಿಕ್ಷಕರ ಮೇಲಿನ ಜವಾಬ್ದಾರಿಗಳು, ಅವರನ್ನು ವಿದ್ಯಾರ್ಥಿಗಳು ಮತ್ತು ಜನರು ನೋಡುವ ಬಗೆ ಹಾಗೂ ಶಿಕ್ಷಕರ ಮನೋಭಾವಗಳು ಕೂಡ ಈ ಕಾಲಘಟ್ಟದಲ್ಲಿ ಬದಲಾಗಿದೆ. ಆದರೆ ಅವರ ಹೊಣೆಗಾರಿಕೆಗಳು ಬದಲಾಗಿಲ್ಲ. ಅವರ ಜವಾಬ್ದಾರಿ ಮತ್ತು ಒತ್ತಡಗಳು ಇನ್ನಷ್ಟು ಹೆಚ್ಚಾಗಿವೆ. ಇಂತಹ ಅನೇಕ ಕಾರಣಗಳಿಂದಾಗಿ ‘ಶಿಕ್ಷಕರ ದಿನಾಚರಣೆ’ ಮಹತ್ವ ಪಡೆದುಕೊಳ್ಳುತ್ತದೆ. ಭಾರತದ ಮೊದಲ ಉಪ ರಾಷ್ಟ್ರಪತಿ ಮತ್ತು ಎರಡನೆಯ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು 1888ರ ಸೆ. 5ರಂದು. ಅವರ ಗೌರವಾರ್ಥ ಸೆ. 5ರ ದಿನವನ್ನು ಶಿಕ್ಷಕರ ದಿನವೆಂದು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ಅವರು ಸುದೀರ್ಘ ಸಮಯ ವಿವಿಧ ಕಾಲೇಜುಗಳಲ್ಲಿ ಪ್ರೊಫೆಸರ್ ಆಗಿ ಬೋಧನಾ ವೃತ್ತಿ ನಡೆಸಿದ್ದರು. ಶಿಕ್ಷಕರಲ್ಲದೆ ಅವರು ಬರಹಗಾರರೂ ಆಗಿದ್ದರು.

ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ನಂತರ 1962ರಲ್ಲಿ ರಾಷ್ಟ್ರಪತಿ ಹುದ್ದೆಗೆ ಏರಿದ ಡಾ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸಲು ಅನುಮತಿ ನೀಡುವಂತೆ ಅವರ ವಿದ್ಯಾರ್ಥಿಗಳು ಕೋರಿದ್ದರು. ಆಗ ಅವರು ತಮ್ಮ ಜನ್ಮದಿನದ ಬದಲು ಅಂದು ಶಿಕ್ಷಕರ ದಿನ ಎಂದು ಆಚರಣೆ ಮಾಡುವಂತೆ ಸಲಹೆ ನೀಡಿದ್ದರು. ಹೀಗೆ 1962ರಲ್ಲಿ ಮೊದಲ ಬಾರಿಗೆ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ರಾಧಾಕೃಷ್ಣನ್ ಅವರ ಜನ್ಮದಿನ ‘ಶಿಕ್ಷಕರ ದಿನ’ವಾಗಿ ಆಚರಣೆಯಾಗುತ್ತಿದೆ.

ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಗೆ ಸೂಕ್ತ ರೂಪು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಶಿಕ್ಷಕರು. ಹೀಗಾಗಿ ಶಿಕ್ಷಕರನ್ನು ನೆನಪಿಸಿಕೊಳ್ಳುವುದು ಮತ್ತು ಗೌರವಿಸುವುದು ಈ ಆಚರಣೆಯ ಉದ್ದೇಶ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೋಷ ವಾಕ್ಯಗಳನ್ನು ಕೇಳಿರುತ್ತೇವೆ. ಅಂತಹ ಭವಿಷ್ಯದ ಪ್ರಜೆಗಳನ್ನು ಸಿದ್ಧಪಡಿಸುವ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಶಿಕ್ಷಕರ ಮೇಲಿರುತ್ತದೆ. ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು” ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು. ಈ ದಿನವನ್ನು ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ನಾವೆಲ್ಲರೂ ಶಿಕ್ಷಕರಿಗೆ ನೀಡುವ ಗೌರವವಾಗಿದೆ.


ಇಂಟರ್‌ ನ್ಯಾಷನಲ್‌ ಡೇ ಆಪ್‌ ಚಾರಿಟಿ
ಮದರ್ ತೆರೇಸಾ… ಅನಾಥರು, ಬಡವರು, ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ. ಇತರರಿಗಾಗಿ ಬದುಕದ ಬದುಕು ಬದುಕೇ ಅಲ್ಲ. ನೀವು ಹೋದಲ್ಲೆಲ್ಲ ಪ್ರೀತಿಯನ್ನು ಪಸರಿಸಿ. ನಿಮ್ಮ ಬಳಿ ಬಂದವರು ಸಂತಸಪಡದೆ ಹೋಗಬಾರದು” ಎಂಬ ಸ್ಫೂರ್ತಿದಾಯಕ ಮಾತುಗಳಿಂದ ಇಡೀ ಮನುಕುಲವನ್ನೇ ಗೆದ್ದಿದ್ದ ಭಾರತದ ‘ಅಮ್ಮ ಮದರ್‌ ತೆರೇಸಾ ಅವರ ಪುಣ್ಯತಿಥಿ ಇಂದು, ಅದೇ ದಿನವನ್ನುಇಂಟರ್‌ ನ್ಯಾಷನಲ್‌ ಡೇ ಆಪ್‌ ಚಾರಿಟಿ ಎಂದು ಆಚರಿಸಲಾಗುವುದು.

ಭಾರತದಲ್ಲಿ ಸುಮಾರು ನಲ್ವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಬಡ ರೋಗಿಗಳ ಸೇವೆ ಮಾಡಿದವರು ಇವರು. ಇವರ ಈ ಸೇವಾ ಗುಣವನ್ನು ಪರಿಗಣಿಸಿ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿಯ ಗೌರವವೂ ಇವರಿಗೆ ಸಂದಿದೆ. ಆಗಸ್ಟ್‌ 26, 1910ರಂದು ಜನಿಸಿದ್ದ ತೆರೇಸಾ ಅವರ ಮೊದಲ ಹೆಸರು ಆಗ್ನೆಸೇ ಗೋನ್‌ಕ್ಸೆ ಬೋಜಕ್ಸಿಯು. 1950ರಲ್ಲಿ ಮಿಷನರೀಸ್ ಆಫ್ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಕೋಲ್ಕತ್ತಾದಲ್ಲಿ ಸ್ಥಾಪಿಸಿದ ಇವರು ಸುಮಾರು ನಲ್ವತ್ತೈದು ವರ್ಷಗಳ ಕಾಲ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದರು. ಈ ಮೂಲಕ ಅನೇಕರ ಬದುಕಿನಲ್ಲಿ ಭರವಸೆಯ ಕಿರಣ ಮೂಡಿಸಿದ್ದರು.

ಅವರ ಮಹತ್ವದ ಕೆಲಸವನ್ನು ಗೌರವಿಸಲು, ಸೆ ೫ರಂದು ಅಂದರೆ ಅವರ ಪುಣ್ಯತಿಥಿ ದಿನವನ್ನು 2012 ರಲ್ಲಿ ವಿಶ್ವಸಂಸ್ಥೆಯು ವಾರ್ಷಿಕ ಅಂತಾರಾಷ್ಟ್ರೀಯ ಚಾರಿಟಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಮದರ್ ತೆರೇಸಾ ತನ್ನ ಇಡೀ ಜೀವನವನ್ನು ದಾನ ಕಾರ್ಯಗಳಿಗೆ ಅರ್ಪಿಸುವ ಮೂಲಕ ಮಾಡಿದ ದಣಿವರಿಯದ ಕೆಲಸವನ್ನು ನೆನಪಿಸುತ್ತದೆ. ಪ್ರತಿ ವರ್ಷವೂ ಈ ವಿಶೇಷ ದಿನವನ್ನು , ವಿವಿಧ ದತ್ತಿಗಳ ಕೆಲಸಗಳ ಮೂಲಕ ಆಚರಿಸಲಾಗುತ್ತದೆ, ಇದು ದಾನ ಕಾರ್ಯಗಳನ್ನು ಮಾಡಲು ಮತ್ತು ಜನರಿಗೆ ಶಿಕ್ಷಣ ನೀಡಲು ಮತ್ತು ಅನೇಕ ದತ್ತಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರೋತ್ಸಾಹಿಸಲಾಗುತ್ತದೆ.