ಶಿಕ್ಷಕರ ದಿನಾಚರಣೆ. ಸೊಲ್ಲಮ್ಮ ಕ್ಲಸ್ಟರ್ ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.06  :- ಅನೇಕ ವರ್ಷಗಳ ಕಾಲ  ಅನೇಕ ಪ್ರತಿಭೆಗಳನ್ನು ಸೃಷ್ಟಿಸಿ ದೇಶದ ಸತ್ಪ್ರಜೆಯನ್ನಾಗಿಸಿದ ಶಿಕ್ಷಕ ವೃತ್ತಿಯ ಸೇವೆಗೆ ಎಷ್ಟು ಹೊಗಳಿದರು ಸಾಲದು ಅಂತಹ ವೃತ್ತಿಯಲ್ಲಿ ಅಪಾರ ಸೇವೆ ಸಲ್ಲಿಸಿ ವೃತ್ತಿಯಿಂದ ವಯೋನಿವೃತ್ತ ಇಬ್ಬರು ಶಿಕ್ಷಕಿಯರನ್ನು ತಾಲೂಕು  ಬಿ ಆರ್ ಸಿ ಕಚೇರಿಯಲ್ಲಿ  ಕೂಡ್ಲಿಗಿ ಶ್ರೀ ಸೊಲ್ಲಮ್ಮ ಮಂದಿರ  ಕ್ಲಸ್ಟರ್ ವತಿಯಿಂದ ಶಿಕ್ಷಕರ ದಿನಾಚರಣೆಯಂದು ಸನ್ಮಾನಿಸಿ ಪುಸ್ತಕ ನೀಡಿ ಗೌರವಿಸಿ ಬೀಳ್ಕೊಡಲಾಯಿತು. 
ಕೂಡ್ಲಿಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎನ್. ಸಾಕಮ್ಮ ಹಾಗೂ ಕೆರೆಕಾವಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುವರ್ಣ ಎಂಬಿಬ್ಬರು ವಯೋನಿವೃತ್ತರಾಗಿದ್ದು ಇವರನ್ನು ಸೊಲ್ಲಮ್ಮ ಮಂದಿರ ಕ್ಲಸ್ಟರ್ ವತಿಯಿಂದ ಇಂದು ಬಿ ಆರ್ ಸಿ ಕಚೇರಿಯಲ್ಲಿ ಪುಸ್ತಕ ನೀಡಿ ಗೌರವ ಸನ್ಮಾನ ಮಾಡುವ ಮೂಲಕ ಗೌರವಿಸಿದ   ಸಿ ಆರ್ ಪಿ ಶೇಖರಪ್ಪ ಮಾತನಾಡಿ ತಂದೆ ತಾಯಿ ನಂತರದ ಗೌರವ ಸ್ಥಾನವನ್ನು ಗುರುವೃಂದಕ್ಕೆ ನೀಡಲಾಗಿದ್ದು ಕಗ್ಗಲ್ಲನ್ನು ಮೂರ್ತಿ ರೂಪಕ್ಕೆ ತರುವಂತೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಗರಡಿಯಂತಹ ಪ್ರಾಥಮಿಕ ಶಾಲೆಯಲ್ಲಿ ಮೊದಲ  ಹಂತದಲ್ಲೇ ತಿದ್ದಿ ತೀಡಿ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪ್ರಜೆಯಂತೆ ರೂಪಿಸಿ ದೇಶಪ್ರೇಮ ಬೆಳೆಸುವ ಹಾಗೂ ಇಡೀ ದೇಶವನ್ನು ತಿದ್ದುವ ಶಕ್ತಿ ಇದೆ ಎಂದರೆ ಅದು ಶಿಕ್ಷಕರಿಗೆ ಮಾತ್ರ ಎನ್ನುವುದು ಸತ್ಯ ಮಾತಾಗಿದೆ ಎಂದರು ಅಂತಹ ಶಿಕ್ಷಕ ವೃತ್ತಿಯಿಂದ ಆಪಾರ ಸೇವೆಗೈದು ನಿವೃತ್ತಿ ಹೊಂದುವ ಶಿಕ್ಷಕರಿಗೆ ಆ ದೇವರು ಆರೋಗ್ಯ ಕರುಣಿಸಲಿ ಎಂದರು.
ಈ ಸಂದರ್ಭದಲ್ಲಿ ತಾಲೂಕು  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಕೆ.ಜೀನಾಬಿ ,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾದ ವಿ.ಗೀತಾ,   ಮತ್ತು ಬಿ. ಆರ್. ಪಿ ರವರಾದ ಮಂಜುನಾಥ ಹಾಗೂ  ಸದರಿ ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.