ಶಿಕ್ಷಕರ ದನಿಯಾಗಿ ನಮೋಶಿ ನಿಲ್ಲಲಿದ್ದಾರೆ: ಆನಂದ್ ಸಿಂಗ್

ಹೊಸಪೇಟೆ ನ 18 : ವಿಧಾನಪರಿಷತ್ತಿಗೆ ನಾಲ್ಕನೇ ಬಾರಿ ಆಯ್ಕೆಯಾಗಿರುವ ಶಶೀಲ್ ಜಿ. ನಮೋಶಿ ಅವರು ಶಿಕ್ಷಕರ ಹಾಗೂ ಉಪನ್ಯಾಸಕರ ದನಿಯಾಗಿ ನಿಲ್ಲಲಿದ್ದು, ಈಶಾನ್ಯ ಭಾಗದ ಶಿಕ್ಷಣ ಕ್ಷೇತ್ರದ ಏಳಿಗೆಗೆ ಕಾರಣಲಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು
ಅವರು‌ ನಿನ್ನೆ ಸಂಜೆ
ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಶಶೀಲ್ ನಮೋಶಿ ಅವರಿಗೆ ಹೊಸಪೇಟೆಯ ಶಿಕ್ಷಕರ ಹಾಗೂ ಉಪನ್ಯಾಸಕರ ಬಳಗ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮತದಾರರು ಅಭ್ಯರ್ಥಿ ಮೇಲೆ ನಿರೀಕ್ಷೆ ಇಟ್ಟುಕೊಂಡೇ ಮತದಾನ ಮಾಡುತ್ತಾರೆ. ಅಧಿಕಾರ ವಹಿಸಿಕೊಂಡ ನಂತರ ಕಾರ್ಯನಿರ್ವಹಿಸುವುದು ಅಭ್ಯರ್ಥಿಯ ಕರ್ತವ್ಯ, ಶಿಕ್ಷಣ ಕೇಂದ್ರದಲ್ಲಿ ಚಿರಪರಿಚಿತರಾಗಿರುವ ನಮೋಶಿಯನ್ನು ನಂಬಿ ಪದವೀದರ ಮತದಾರರು ತಮ್ಮ ಮತ ನೀಡಿದ್ದಾರೆ. ನಮೋಶಿಯವರಿಗೆ ಯೋಜನೆ ಸಾಕಾರಗೊಳಿಸುವ ಕರ್ತವ್ಯ ಶುರುವಾಗಿದೆ ಅದಕ್ಕೆ ಅವರು ಕಟಿ ಬದ್ಧರಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದರು.
ಸನ್ಮಾನ ಸ್ವೀಕರಿಸಿದ ನಮೋಶಿ ಅವರು ಸಚಿವರಿಗರ ಶಿಕ್ಷಣದ ಮೇಲೆ ಹೆಚ್ಚಿನ ಆಸಕ್ತಿ ಇದೆ. ಹೊಸಪೇಟೆಯು ಜಿಲ್ಲಾ ಕೇಂದ್ರವಲ್ಲದಿದ್ದರೂ ಎಲ್ಲಾ ರೀತಿಯ ಸೌಲಭ್ಯ ಇಲ್ಲಿದೆ ಅದಕ್ಕೆ ಮುಖ್ಯ ಕಾರಣೀಭೂತರೇ ಸಚಿವರಾಗಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕೆಂಬ ಹಠದಿಂದ ಕೆಲಸ ಮಾಡಿದ್ದಾರೆ. ಅದೇ ರೀತಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ಹಲವು ರಾಜಕೀಯ ನೇತಾರರು ಚುನಾವಣೆ ಪ್ರಚಾರ ಕಾರ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ, ನಾನು ಕೇವಲ ಶಿಕ್ಷಕ ಜಾತಿಗೆ ಸೇರಿದವನಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಸೌಲಭ್ಯಗಳನ್ನು ತರುವಲ್ಲಿ ಶ್ರಮಿಸುವೆ. ನಾಲ್ಕು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗೊಂಡಿರುವ ನನಗೆ ಪ್ರತಿ ಬಾರಿಯು ಹೊಸಪೇಟೆಯಿಂದಲೇ ಹೆಚ್ಚಿನ ಮತ ಸಿಕ್ಕಿದೆ. ಈ ಬಾರಿ 2000 ಅಂತರದ ಜಯ ಸಿಗಬಹುದೆಂದು ನಿರೀಕ್ಷಿಸಿದ್ದೆ ಅದಕ್ಕೂ ಮೀರಿದ ಬಹುಮತ ನನಗೆ ಸಿಕ್ಕಿದೆ, ಗುಲ್ಬರ್ಗಾ ಬಿಟ್ಟರೆ ಬಳ್ಳಾರಿ ಅದರಲ್ಲೂ ಹೊಸಪೇಟೆಯಿಂದಲೇ ಹೆಚ್ಚಿನ ಮತ ನನಗೆ ಸಿಕ್ಕಿದೆ,
ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ, ಮುಂಬಡ್ತಿ ಕುರಿತಾದ ವಿಷಯಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಸಚಿವರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರುತ್ತೇನೆ ಎಂದರು.

ಡಯೆಟ್ ಉಪನ್ಯಾಸಕ ಎಲ್ ಡಿ ಜೋಷಿ ಅವರು ಮಾತನಾಡಿ ನಮೋಶಿ ಅವರು ಇಪ್ಪತ್ತು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಗಮನಕ್ಕೆ ತಂದರೆ ವಿಧಾನ ಪರಿಷತ್ ನಲ್ಲಿ ಚರ್ಚಿಸಿ ಪರಿಹಾರ ನೀಡುತ್ತಾರೆ, ಸಾಮಾಜಿಕವಾಗಿ ತಮ್ಮ ಕೆಲಸದಲ್ಲಿ ಇರುವ ಬೇಡಿಕೆಯನ್ನು ಶಿಕ್ಷಕರು ಉಪನ್ಯಾಸಕರು ನೀಡಬೇಕು ಎಂದರು.
ಅಭಿನಂದನಾ ಸಮಾರಂಭದಲ್ಲಿ ಹುಡಾ ಅಧ್ಯಕ್ಷ ಅಶೋಕ್ ಜೀರೆ, ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್,
ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿಸಿದ್ಧಯ್ಯ ಸ್ವಾಮಿ, ಬಿಇಒ ಸುನಂದಾ, ಹಗರಿಬೊಮ್ಮನಹಳ್ಳಿ ಬಿಇಒ ಶೇಖರಪ್ಪ ಹಾಗೂ ಕುಷ್ಠಗಿ ಬಿಇಒ ಚನ್ನಬಸಪ್ಪ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಶಿಕ್ಷಕರು ಉಪನ್ಯಾಸಕರು ಇದ್ದರು.


ಜಿಲ್ಲೆ ಘೋಷಣೆಗೆ ನೀತಿ ಸಂಹಿತೆ ತಡೆ:
ವಿಜಯನಗರ ಜಿಲ್ಲೆಯ ಘೋಷಣೆ ಕುರಿತಂತೆ ಪುನರುಚ್ಚರಿಸಿದ ಸಚಿವ ಆನಂದ್ ಸಿಂಗ್ ಅವರು. ಈ ವಿಚಾರದಲ್ಲಿ ಪಕ್ಷದ ನಾಯಕರು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ, ವಿವಿದ ಚುನಾವಣೆ ಮತ್ತಿತರ ಕಾರಣಗಳಿಂದ ಜಿಲ್ಲೆ ಘೋಷಣೆ ಪ್ರಸ್ತಾಪ ಮುಂದಕ್ಕೆ ಹೋಗುತ್ತಿದೆ. ಈ ಕುರಿತು ಒತ್ತಡವೂ ಹೆಚ್ಚಿದೆ ಎಂದ ಅವರು, ಜಿಲ್ಲೆಯಾಗುವ ವಿಶ್ವಾಸವಂತೂ ನನಗೆ ಇದೆ. ಇದರ ಕುರಿತು ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು‌ ಹೇಳಿದರು.