ಶಿಕ್ಷಕರ ಕ್ಷೇತ್ರದ ಫಲಿತಾಂಶ ಲೋಕಾ ದಿಕ್ಸೂಚಿ: ವಿಶ್ವನಾಥ್

ಸಂಜೆವಾಣಿ ನ್ಯೂಸ್
ಮೈಸೂರು, ಫೆ.24:- ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಮುಂಬರುವ 2024ರ ಲೋಕಸಭಾ ಚುನಾಣೆಗೆ ದಿಕ್ಸೂಚಿ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ರಾಜ್ಯದ ಜನರು ತಿರಸ್ಕರಿಸಿದರು. ಇದರ ಪರಿಣಾಮ ಬಿಜೆಪಿ ದೊಡ್ಡಮಟ್ಟದ ಗೆಲುವು ಸಾಧಿಸಿತು, ಕಾಂಗ್ರೆಸ್‍ಗೆ ಹೀನಾಯ ಸೋಲಾಯಿತು. ಅದೇ ರೀತಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಲಾಭವಾಗುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ರಾಜ್ಯದ ಜನರು ಮೈತ್ರಿಯ ವಿರುದ್ದ ಇದ್ದಾರೆ ಎಂಬುದು ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶದ ಮೂಲಕ ಗೊತ್ತಾಗಿದೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ಖಜಾನೆ ತುಂಬಿತ್ತಾ?
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಹೀಗಾಗಿ ದೇಗುಲಗಳ ಹುಂಡಿ ಹಣಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು,
ಬಿಜೆಪಿ ಸರ್ಕಾರದ ಅವಧಿಯಲ್ಲೇನು ರಾಜ್ಯದ ಖಜಾನೆ ಭರ್ತಿಯಾಗಿತ್ತಾ? ನಿಮ್ಮ ಅಪ್ಪನನ್ನು ಜೈಲಿಗೆ ಹಾಕಿಸಿದ್ದೇ ನೀವು, ನೀವೇನು ಸತ್ಯವಂತರಾ? ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಬರಲಿ:
ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ನಾನು ಸಹಕಾರ ಸಚಿವನಾಗಿದ್ದಾಗಲೂ ಈ ಬಗ್ಗೆ ಪ್ರಯತ್ನ ಮಾಡಿದ್ದೆ. ಈಗ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಸರ್ಕಾರ ಮುಂದಾಗಿದ್ದು, ಇದಕ್ಕೆ ಶಾಸಕ ಜಿ.ಟಿ. ದೇವೇಗೌಡ ವಿರೋಧಿಸುತ್ತಿರುವುದು ಸರಿಯಲ್ಲ. ಅವರ ಪತ್ನಿ ಲಲಿತಾ ಅವರು ರಾಜ್ಯ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ, ಮಗ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದು, ಮೀಸಲಾತಿ ಜಾರಿಯನ್ನು ವಿರೋಧಿಸುತ್ತಿರುವ ಜಿ.ಟಿ. ದೇವೇಗೌಡರೇ ನೀವು ಕೇವಲ ಒಂದು ಸಮುದಾಯದ ಬೆಂಬಲದಿಂದ ಗೆದ್ದಿದ್ದೀರಾ? ಬೇರೆ ಸಮುದಾಯಗಳ ಋಣದಲ್ಲಿ ನೀವು ಇಲ್ಲವೇ? 67 ಸಾವಿರ ಸಹಕಾರ ಬ್ಯಾಂಕ್‍ಗಳ ಪೈಕಿ 42 ಸಾವಿರ ಬ್ಯಾಂಕ್‍ಗಳು ಲಾಭದಲ್ಲಿ ನಡೆಯುತ್ತಿವೆ. ಆದರೆ ಈ ಲಾಭಾಂಶವನ್ನು ಇವರೇ ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹೀಗಾಗಿಯೇ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಜಿ.ಟಿ. ದೇವೇಗೌಡ ವಿರೋಧ ಮಾಡುತ್ತಿದ್ದಾರೆ ಎಂದು ದೂರಿದರು.
ಮರಣೋತ್ತರ ಭಾರತ ರತ್ನ ನೀಡಿ
ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಹಾಗೂ ಸಿದ್ದಗಂಗಾ ಮಠದ ಪೀಠಾಧಿಪತಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರುಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಎಂಎಲ್‍ಸಿ ಎಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಬೇಕಿದ್ದು, ಈ ಕುರಿತು ರಾಜ್ಯದ ಮುಖ್ಯಮಂತ್ರಿ, ಶಾಸಕರುಗಳು, ಎಂಪಿಗಳು ಕೂಡ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.