ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟ

ಬೆಂಗಳೂರು, ಡಿ. ೩೦- ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಪ್ರಕಟಿಸಲಾಗಿದೆ.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಸಿದ್ಧಪಡಿಸುವ ಸಂಬಂಧ ೦೧-೧೧-೨೦೨೩ ಅರ್ಹತಾ ದಿನವಾಗಿ ಉಲ್ಲೇಖಿಸಿ ಮತದಾರ ಪಟ್ಟಿಯನ್ನು ಸಿದ್ಧಗೊಳಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಅದರಂತೆ ಈಗ ಅಂತಿಮ ಮತದಾರರ ಪಟ್ಟಿಯನ್ನು ಇಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಪದವೀಧರ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು ೧,೫೦,೧೮೪ ಮತದಾರರಿದ್ದು, ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ೭೪,೨೧೮ ಮತದಾರರಿದ್ದರೆ, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ೧,೦೦೧೦೦ ಮತದಾರರಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ೨೩, ೫೬೫ ಮತದಾರರಿದ್ದರೆ, ಕರ್ನಾಟಕ ನೈರುತ್ಯ ಕ್ಷೇತ್ರದಲ್ಲಿ ೧೯,೮೩೭ ಮತದಾರರಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ೧೮೪೭೫ ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ೧೬,೦೬೩ ಮತದಾರರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಅವರ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಬೆಂಗಳೂರು ಈಶಾನ್ಯ ಪದವೀಧರ, ನೈರುತ್ಯ ಪದವೀಧರ, ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರ, ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರಗಳ ಅವಧಿ ಬರುವ ಜೂನ್‌ನಲ್ಲಿ ಮುಗಿಯಲಿದ್ದು, ಅಷ್ಟರೊಳಗೆ ಈ ಕ್ಷೇತ್ರಗಳಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.