ಶಿಕ್ಷಕರ ಕ್ರಿಯಾಶೀಲತೆ ಮಕ್ಕಳ ಕಲಿಕೆಗೆ ಸಹಕಾರಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಫೆ.೧೭: ಶಿಕ್ಷಕರು ಕ್ರಿಯಾಶೀಲತೆಯಿಂದ ಬೋಧನೆ ಮಾಡಿದಾಗ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕುರಿತು ಶೈಕ್ಷಣಿಕ ಅನುಷ್ಟಾನಾಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಒಂದು ಪ್ರಜ್ವಲಿಸುವ ದೀಪ ಮತ್ತೊಂದು ದೀಪವನ್ನು ಬೆಳಗಿಸುವಂತೆ ಶಿಕ್ಷಕರು ದೀಪದಂತೆ ಪ್ರಜ್ವಲಿಸಿ ಕ್ರಿಯಾಶೀಲತೆಯಿಂದ ಬೋಧಿಸಿದಾಗ ವಿದ್ಯಾರ್ಥಿಗಳೆಂಬ ಹಣತೆ ಬೆಳಗಿಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಸ್ಪಷ್ಟಓದು, ಶುದ್ಧ ಬರಹ, ಸಂಖ್ಯಾಜ್ಞಾನ ಸಾಮರ್ಥ್ಯ ಬೆಳೆಸುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ ಮಾತನಾಡಿ, ಶಾಲೆಗಳಲ್ಲಿ ವಾರ್ಷಿಕ ಕ್ಯಾಲೆಂಡರ್ ನಲ್ಲಿ ಸಿದ್ಧಪಡಿಸಿಕೊಂಡ ಕ್ರಿಯಾಯೋಜನೆಯಂತೆ ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಕಲಿಕಾ ಸಾಮರ್ಥ್ಯದಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ವಿವಿಧ ಬೋಧನಾ ವಿಧಾನ, ಚಟುವಟಿಕೆ ಬಳಸಿಕೊಂಡು ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು ಎಂದು ತಿಳಿಸಿದರು.