ಶಿಕ್ಷಕರ ಕರ್ತವ್ಯ ಮಹತ್ವದ್ದು-ಅಶ್ವಥ್

ಕೋಲಾರ,ಜ.೧೦: ಸ್ಕೌಟ್ಸ್-ಗೈಡ್ಸ್ ಶಿಕ್ಷಣವನ್ನು ಎಲ್ಲಾ ಮಕ್ಕಳಿಗೆ ತಲುಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಕೋಲಾರ ತಾಲ್ಲೂಕಿನ ಜಿಲ್ಲಾ ಸಹಾಯಕ ಆಯುಕ್ತರಾದ ಅಶ್ವಥ್ ನಾರಾಯಣ ಅವರು ಅಭಿಪ್ರಾಯಪಟ್ಟರು.
ಕೋಲಾರ ನಗರದ ಸ್ಕೌಟ್ಸ್ ಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ತರಗತಿಗಳನ್ನು ನಡೆಸಲು ಪ್ರತಿ ಶಾಲೆಯಲ್ಲಿ ಕನಿಷ್ಠ ಒಬ್ಬರಾದರೂ ತರಬೇತಿ ಪಡೆಯಬೇಕು, ತರಬೇತಿಯನ್ನು ನಡೆಸಲು ಬೇಕಾದ ಸೌಲಭ್ಯಗಳನ್ನು ದಾನಿಗಳ ಸಹಕಾರದಿಂದ ಕೈಗೊಳ್ಳಲಾಗುವುದು. ಸ್ಕೌಟ್ಸ್-ಗೈಡ್ಸ್ ಶಿಕ್ಷಣ ಎಲ್ಲಾ ಮಕ್ಕಳಿಗೂ ಸಿಗುವಲ್ಲಿ ಶಿಕ್ಷಕರು ಸಮುದಾಯದ ಸಹಕಾರ ಪಡೆದು ಕಾರ್ಯಗತಮಾಡಬೇಕಾಗಿದೆ ಸ್ಕೌಟ್ಸ್-ಗೈಡ್ಸ್ ಶಿಬಿರ ಮತ್ತು ಕಾರ್ಯಕ್ರಮಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ ಸದಾ ಸಿಗಲಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಾರ್ಯಧ್ಯಕ್ಷರಾದ ಕೆ.ಎಸ್.ನಾಗರಾಜ ಗೌಡ ರವರು ಮಾತನಾಡಿ ತರಬೇತಿ ಪಡೆದ ಎಲ್ಲಾ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ವಾರದಲ್ಲಿ ಒಮ್ಮೆ ತರಗತಿಯನ್ನು ನಡೆಸಲು ಕ್ರಿಯಾಯೋಜನೆಯನ್ನು ತಯಾರು ಮಾಡಿಕೊಂಡು ತರಬೇತಿ ನಾಯಕರ ಮಾರ್ಗದರ್ಶನದಲ್ಲಿ ಸಾಗಬೇಕು. ಆನ್ ಲೈನ್ ನಲ್ಲಿ ತರಗತಿಯನ್ನು ನಡೆಸಿದರೆ ರಾಜ್ಯ ಸಂಸ್ಥೆಯಿಂದ ಒಂದು ಸಾವಿರ ಗೌರವಧನ ಸಿಗಲಿದೆ, ಕೋಲಾರ ತಾಲ್ಲೂಕಿನಲ್ಲಿನ ತರಬೇತಿ ಪಡೆದ ಶಿಕ್ಷಕರು ತಮ್ಮ ಹೆಸರುಗಳನ್ನು ನೊಂದಣಿ ಮಾಡಿ ಅನ್ ಲೈನ್ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.