
ರಾಯಚೂರು,ಆ.೩೧- ಸೆ.೦೩ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಾಗದಂತೆ ಅತ್ಯಂತ ಕ್ರಮಬದ್ಧವಾಗಿ ಮತ್ತು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ ಅವರು ಹೇಳಿದರು.
ಆ.೩೦ರ(ಬುಧವಾರ) ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ(ಖಿಇಖಿ) ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ತಪಾಸಣೆಗೆ ಒಳಪಡಿಸಲಾಗುವುದು. ಪ್ರತಿಯೊಂದು ಕೊಠಡಿಗೆ ಗಾಳಿ ವ್ಯವಸ್ಥೆ, ಸಿಸಿಟಿವಿ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಪರೀಕ್ಷೆಯ ಕೇಂದ್ರದ ೨೦೦ ಮೀಟರ್ ಸುತ್ತುವರೆದ ಪ್ರದೇಶವನ್ನು ಈ ಪರೀಕ್ಷೆ ಕೇಂದ್ರಕ್ಕೆ, ನಿಯೋಜಿಸಿದ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ ಯಾರು ಪ್ರದೇಶವನ್ನು ಪ್ರವೇಶಿಸಕೂಡದು, ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ ಎಲ್ಲಾ ಝರಾಕ್ಸ್ ಅಂಗಡಿಗಳನ್ನು ಹಾಗೂ ಪಾನ್‌ಶಾಪ್ ಅಂಗಡಿಗಳನ್ನು ಪರೀಕ್ಷೆ ಸಮಯದಲ್ಲಿ ಕಡ್ಡಾಯವಾಗಿ ಬಂದ್ ಮಾಡುವಂತೆ ಹೇಳಿದರು.
ಪರೀಕ್ಷೆ ಪ್ರಾರಂಭವಾಗುವ ೩೦ ನಿಮಿಷಗಳ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನು ನೀಡಲಾಗುವುದು. ಪರೀಕ್ಷಾ ಪ್ರಾರಂಭವಾದ ಬೆಳಗ್ಗೆ ೯:೧೫ಕ್ಕೆ, ಮಧ್ಯಾಹ್ನ ೨:೦೦ ಗಂಟೆಯ ನಂತರ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಒಮ್ಮೆ ಅಭ್ಯರ್ಥಿಯು ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ಪರೀಕ್ಷೆ ಮುಗಿಯುವವರೆವಿಗೂ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅವಕಾಶವಿರುವುದಿಲ್ಲ ಎಂದರು.
ಕೈ ಗಡಿಯಾರ, ಮೊಬೈಲ್, ಕ್ಯಾಲ್‌ಕ್ಯುಲೇಟರ್, ಪೇಜರ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮತ್ತು ಲಾಗ್‌ಟೇಬಲ್, ಬಿಳಿ ಪ್ಲೂಯಡ್, ಬೆಂಕಿಪೊಟ್ಟಣ ಅಥವಾ ಸಿಗರೇಟ್ ಲೈಟರ್ ಮುಂತಾದ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ, ಸಹಾಯಕ ಆಯುಕ್ತೆ ಮಹಿಬೂಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಖಾರಿಗಳು ಉಪಸ್ಥಿತರಿದ್ದರು.