ಶಿಕ್ಷಕರು ಸಮಾಜದ ಮಾರ್ಗದರ್ಶಕರು: ಧರ್ಮಸೇನ

ತಿ.ನರಸೀಪುರ: ಜ.04:- ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಸ್ಮರಣೀಯವಾಗಿದ್ದು,ಸಮಾಜದ ಒಳಿತು-ಕೆಡಕುಗಳನ್ನು ತಿದ್ದಿ ಹೇಳುವ ಸಾಮಥ್ರ್ಯ ಇರುವುದು ಶಿಕ್ಷಕರಿಗೆ ಮಾತ್ರ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆ,ಶಿಕ್ಷಕರ ಕಾರ್ಯಾಗಾರ ಮತ್ತು 2023ನೇ ವರ್ಷದ ನೂತನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯಾವುದೇ ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಹಲವು ಮಂದಿ ಶಿಕ್ಷಕರಿರುತ್ತಾರೆ.ವ್ಯಕ್ತಿಯ ಜೀವನದ ಪ್ರತಿ ಹಂತದಲ್ಲೂ ಶಿಕ್ಷಕರು ತಮ್ಮ ಪಾತ್ರವನ್ನು ಅಚ್ಚುಕ್ಕಟ್ಟಾಗಿ ನಿರ್ವಹಿಸಿರುತ್ತಾರೆ.ಹಾಗಾಗಿ ಗುರುಗಳು ಪರಮ ಪೂಜ್ಯರು ಎಂದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮಾತನಾಡಿ,ಸಾವಿತ್ರಿ ಬಾಪುಲೆಯವರು ಜಾತೀಯತೆ ಆಚರಣೆಯ ಕಾಲಘಟ್ಟದಲ್ಲಿ ಶಾಲೆಯನ್ನು ಪ್ರಾರಂಭಿಸಿ ಸಮಾಜದ ಎಲ್ಲ ವರ್ಗದ ಜನರಿಗೂ ವಿದ್ಯಾಭ್ಯಾಸ ನೀಡಲು ಮುಂದಾಗಿದ್ದರು.ಅಲ್ಲದೆ ಅವರು ಜನರ ಆರ್ಥಿಕ ,ಸಾಮಾಜಿಕ ಮತ್ತು ಶೈಕಣಿಕ ಏಳಿಗೆಗಾಗಿ ಸ್ವತಃ ಕಷ್ಟಗಳನ್ನು ಅನುಭವಿಸಿದರು ಎಂದರು.
ಸಮಾಜದ ಪರಿವರ್ತನೆಯ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ.ಹಾಗಾಗಿ ಬಾಪುಲೆಯವರ ಉತ್ಸಾಹ,ಛಲವನ್ನು ಮೈಗೂಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುವ ಮುಖೇನ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರಸ್ತುತ ಅಪರ ಜಿಲ್ಲಾಧಿಕಾರಿಯಾಗಿ ಆಯ್ಕೆಯಾದ ಶಿವರಾಜು ಮತ್ತು ಮಹೇಂದ್ರರನ್ನು ಸನ್ಮಾನಿಸಲಾಯಿತು.2023ನೇ ವರ್ಷದ ದಿನದರ್ಶಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಬಿಇಓ ಮರಿಸ್ವಾಮಿ,ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಡಿ.ಮಾದಪ್ಪ,ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಬಿ.ಆರ್.ಸಿ ನಾಗೇಶ, ಬಿಸಿಯೂಟ ಸಹಾಯಕ ನಿರ್ದೇಶಕ ಮದ್ದಾನಪ್ಪ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಉಪಾಧ್ಯಕ್ಷ ಸುಬ್ರಮಣ್ಯ, ನಾಗೇಶ, ಮಲ್ಲಣ್ಣ ,ಸೇವಾಶ್ರಯ ಫೌಂಡೇಶನ್ ನ ಮಣಿಕಂಠರಾಜ್ ಗೌಡ, ಚಂದ್ರನಾಯಕ ಇತರರು ಹಾಜರಿದ್ದರು.