ಶಿಕ್ಷಕರು ವೃತ್ತಿ ಪಾವಿತ್ರ್ಯತೆ ಕಾಪಾಡಿ-ಬಿಇಒ

ಕೋಲಾರ,ನ.೧೬: ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ಶಿಕ್ಷಕರ ಪಾಲು ಬಹುಮುಖ್ಯವಾಗಿದ್ದು, ಶಿಸ್ತು, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರುವ ಶಿಕ್ಷಕರು ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಅಭಿಪ್ರಾಯಪಟ್ಟರು.
ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘ ನೀಡಿದ ಆತ್ಮೀಯ ಸ್ವಾಗತ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಶಾಲೆಯ ಸರ್ವತೋಮುಖ ಪ್ರಗತಿಗೆ ಕಾರಣರಾದ ಮುಖ್ಯೋಪಾದ್ಯಾಯರು ಸದಾ ಇಲಾಖೆ ನೀಡುವ ವಿವಿಧ ರೀತಿಯ ತರಬೇತಿಗಳು, ಸಭೆ ಸಮಾರಂಭಗಳ ಜ್ಞಾನವನ್ನು ಪಡೆದು ಅನುಷ್ಠಾನಗೊಳಿಸಲು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಸರ್ಕಾರ ನೀಡುವ ಯಾವುದೇ ಸೂಚನೆ ಸುತ್ತೋಲೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯೋಪಾದ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂದಿಯ ಪಾತ್ರ ಸ್ವಾಗತಾರ್ಹವಾಗಿದೆ ಎಂದರು.
ಶಿಕ್ಷಕರ ಸಮಸ್ಯೆಗಳು ಪರಿಹಾರಗಳ ಜೊತೆಗೆ ಹಕ್ಕು ಮತ್ತು ಕರ್ತವ್ಯಗಳನ್ನು ಮನನ ಮಾಡಿಕೊಂಡು ಕರ್ತವ್ಯಕ್ಕೆ ಚ್ಯುತಿ ಬಾರದಂತೆ ತಾಲ್ಲೂಕನ್ನು ಶೈಕ್ಷಣಿಕ ಪ್ರಗತಿಯತ್ತ ಕೊಂಡೊಯ್ಯಲು ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವುದಾಗಿ ತಿಳಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ನೇತೃತ್ವದಲ್ಲಿ ಭೇಟಿ ಮಾಡಿದ್ದ ನಿಯೋಗದಲ್ಲಿ ರಾಜ್ಯ ವಿಭಾಗೀಯ ಕಾರ್ಯದರ್ಶಿ ಆರ್.ಶ್ರೀನಿವಾಸನ್, ಮುಖಂಡರುಗಳಾದ ಚಾಮುಂಡೇಶ್ವರಿ ದೇವಿ, ಭಾಗ್ಯಲಕ್ಷ್ಮಮ್ಮ, ಜಗನ್ನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡರಾದ ಮಂಜುಳ, ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ರುದ್ರಪ್ಪ, ಮುಖಂಡರಾದ ಶಂಕರೇಗೌಡ, ರವಿ, ದಾಸಪ್ಪ, ವಿಜಯಾನಂದ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ರೇವಣ್ಣ ಸಿದ್ಧಪ್ಪ ಶುಭ ಹಾರೈಸಿದರು.