ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿದೀಪ

ರಾಯಚೂರು,ಮಾ.೧೧- ತಾಲೂಕಿನ ಗಂಜಹಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಶುಕ್ರವಾರ ಬೀಳ್ಕೊಡುಗೆ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಸರಸ್ವತಿ ಪೂಜೆಯನ್ನು ನಡೆಸಿ ವಿದ್ಯಾರ್ಥಿಗಳಿಗೆ ಶ್ರೀರಕ್ಷೆಯನ್ನು ನೀಡುವುದರ ಮೂಲಕ ವಿಶಿಷ್ಠ ರೀತಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ, ಪ್ರೌಢ ಶಿಕ್ಷಣ ಜೀವನದ ಅತ್ಯಮೂಲ್ಯ ಘಟ್ಟವಾಗಿದೆ. ಬದುಕಿಗೆ ತಿರುವು ಕೊಡುವ ಈ ಹಂತದಲ್ಲಿ ಸಾಧಿಸುವ ಗುರಿಯೊಂದಿಗೆ ಶ್ರಮವಹಿಸಿಬೇಕು. ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.
ವಿದ್ಯಾರ್ಥಿಗಳು ಅಧ್ಯಯನದಲ್ಲಿ ಶ್ರದ್ಧೆ ಹಾಗೂ ಪರಿಶ್ರಮದ ಜತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು. ಭಾವನಾತ್ಮಕ ಪ್ರಪಂಚವನ್ನು ಬೆಳೆಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬೇಕು. ಅಂಕಗಳ ಜೊತೆಗೆ ಜೀವನಮೌಲ್ಯಗಳು ಅತ್ಯಗತ್ಯ. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿದೀಪ ಶಿಕ್ಷಕರ ಬೋಧನೆಯನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು ವಿದ್ಯೆ ಎಂಬುದು ತಪಸ್ಸು ಅದನ್ನು ಕಠಿಣ ಶ್ರಮದಿಂದ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಕ್ಷಕ ಹುಸೇನಪ್ಪ ಮಾತನಾಡುತ್ತಾ, ಶಿಕ್ಷಕರು ಕಲಿಕೆ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಮನಸ್ಸಿಗೆ ನೋವು ಉಂಟುವ ಮಾಡಿರಬಹುದು. ಆದರೆ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಕಠಿಣ ಶ್ರಮ ತಾಳ್ಮೆಯಿಂದ, ಏಕಾಗ್ರತೆಯಿಂದ ವ್ಯಾಸಂಗ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎನ್ನುವ ಗಾದೆಯ ವಾಡಿಕೆಯಂತೆ ವಿದ್ಯಾರ್ಥಿಗಳು ಸಾಧಿಸುವ ಛಲ ದೊಂದಿಗೆ ಮುನ್ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಓದುವಂತಹ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಸಮಯಕ್ಕೆ ಗೌರವ ನೀಡಿದರೆ ಸಮಯ ಒಂದಲ್ಲ ಒಂದು ದಿನ ನಿಮಗೆ ಗೌರವ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ, ಚಂದ್ರಕಲಾ, ಶಿವಪ್ಪ, ಎಂ. ಮಹೇಶ, ಮಹೇಶ ಕುಮಾರ, ರಾಘವೇಂದ್ರ, ರೂಪದೇವಿ, ತಮೇಶ, ಲಚ್ಚಪ್ಪ, ಎಸ್.ಡಿ.ಎಂ.ಸಿ ಸದಸ್ಯ ನರಸಪ್ಪ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.