ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಬೇಕು

ದೇವದುರ್ಗ: ಶಾಲಾ ಕಾಲೇಜು ಹಂತದ ಮಕ್ಕಳಲ್ಲಿ ಅನೇಕ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಸಮರ್ಥವಾಗಿ ಕೆಲಸ ಮಾಡಬೇಕು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಡಾನ್‌ಬೋಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಬಿಇಒ ಡಾ.ಆರ್.ಇಂದಿರಾ ತಾಲೂಕಿಗೆ ಬಂದಾಗಿನಿಂದ ಶಿಕ್ಷಣ ಗುಣಮಟ್ಟ ಸುಧಾರಣೆಯಾಗಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಾಗಿದ್ದು, ಶಿಕ್ಷಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ೧೬ಹೊಸ ಹಾಸ್ಟೆಲ್‌ಗೆ ಮಂಜೂರಾತಿ ನೀಡಿದ್ದು, ಅದರಲ್ಲಿ ೧೧ ನಮ್ಮ ತಾಲೂಕಿಗೆ ತಂದಿದ್ದೇನೆ. ಸರ್ಕಾರದಿಂದ ಅನುದಾನ ಕೂಡ ಮಂಜೂರಾಗಿದ್ದು, ಶೀಘ್ರದಲ್ಲಿ ಹಾಸ್ಟೆಲ್‌ಗಳು ಆರಂಭವಾಗಲಿವೆ. ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಹಾಗೂ ಉತ್ತಮ ಶಿಕ್ಷಣ ಕೊಡಬೇಕು ಎನ್ನುವ ದೃಷ್ಟಿಯಿಂದ ಹೊಸ ಶಾಲಾ ಕಾಲೇಜು ಆರಂಭಿಸಲಾಗುತ್ತಿದೆ. ಎರಡು ಕೇಂದ್ರೀಯ ವಿದ್ಯಾಲಯಗಳು ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ.
ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಬೋಧನೆ ಮಾಡುವ ಮೂಲಕ ದೇವದುರ್ಗ ತಾಲೂಕಿನಿಂದ ಹೆಚ್ಚುಹೆಚ್ಚು ಜನರು ಸರ್ಕಾರಿ ನೌಕರಿ ಪಡೆಯಬೇಕು. ಈಗಿನಿಂದಲೇ ಆ ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಶಿಕ್ಷಣ ಪ್ರಗತಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಚಂದನಕೇರಿ ಅಭಿವೃದ್ಧಿ ಸೇರಿದಂತೆ ಪುರಸಭೆಯಲ್ಲಿ ಉಳಿಕೆಯಾದ ಸುಮಾರು ೪.೮ಕೋಟಿ ರೂ. ವಿವಿಧ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಇಒ ಡಾ.ಆರ್.ಇಂದಿರಾ, ನಾಗರಾಜ ಗೋಗಿ, ಪ್ರಕಾಶ ಪಾಟೀಲ್ ಇತರರಿದ್ದರು.