ಶಿಕ್ಷಕರು ಮಕ್ಕಳ ಜ್ಞಾನ ಗ್ರಹಿಕೆಯ ಪ್ರೇರಕರಾಗಬೇಕು: ಲಕ್ಷ್ಮಿದೇವಿ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.22:  ಶಿಕ್ಷಕರು ಮಕ್ಕಳ ಜ್ಞಾನಾತ್ಮಕ ವಲಯದ ಅಗತ್ಯತೆಗಳನ್ನು ಪೂರೈಸಲು ಹಾಗೂ ಅವರ ಭಾವನೆಗಳನ್ನು ಅರಿತುಕೊಂಡು ಪ್ರೇರಕನಾಗಿ ಕಾರ್ಯ ಮಾಡಿದಾಗ ಮಾತ್ರ ತನ್ನ ವೃತ್ತಿಯ ಸಾರ್ಥಕತೆ ಹೊಂದಲು ಸಾಧ್ಯ ಎಂದು ವಿಜಯನಗರ ಶಿಕ್ಷಕ‌ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪಿ.ಲಕ್ಷ್ಮಿದೇವಿ ತಿಳಿಸಿದರು.
ಅವರು ಮರಿಯಮ್ಮನಹಳ್ಳಿಗೆ ಸಮೀಪದ ಪೋತಲಕಟ್ಟೆ ಸ. ಹಿ. ಪ್ರಾ. ಶಾಲೆಯ   ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರು ನಮನ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ವೃತ್ತಿ ಮಾನವನ ಜೀವನದ ಅಮೂಲ್ಯವಾದ ಕಾರ್ಯವಾಗಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಅವರ ಅಗತ್ಯತೆಗಳನ್ನು ಪೂರೈಸಲು ನಾವುಗಳು ಶ್ರಮಿಸಬೇಕು ಎಂದು ತಿಳಿಸಿದರು.
 ಹಿರಿಯ ಶಿಕ್ಷಕ ಬಿ.ಎ.ಜನಾರ್ಧನ ಸ್ವಾಮಿ‌ ಪ್ರಾಸ್ತಾವಿಕವಾಗಿ ಮಾತನಾಡಿ,  ಪ್ರಸ್ತುತ ದಿನಮಾನಗಳಲ್ಲಿ ಜಗತ್ತು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ವೇಗವಾಗಿ ಸಾಗುತ್ತಿದೆ. ಅದರ ಜ್ಞಾನದ ಅವಶ್ಯಕತೆ ನಮಗೆ ಇದ್ದು, ಮಕ್ಕಳ ಮನೋವಿಕಾಸಕ್ಕೆ ಬೇಕಾದ ಜ್ಞಾನ ಶಿಕ್ಷಕರಾದ ನಾವುಗಳು ಹೊಂದಬೇಕು ಅಲ್ಲದೇ, ಮಾನವೀಯತೆ, ನೈತಿಕತೆ, ಪ್ರಾಮಾಣಿಕತೆ, ಸಮಾಜದ ಎಲ್ಲಾ ವಿಭಾಗಗಳಲ್ಲಿ ದೂರವಾಗುತ್ತಿದೆ. ದುಷ್ಟ ಚಟುವಟಿಕೆಗಳಿಂದ ಈಗಿನ ಯುವಕರು ಸಮಾಜಬಾಹಿರ ವ್ಯಕ್ತಿಗಳಾಗಿ ಮಾರ್ಪಾಡಾಗುತ್ತಿದ್ದಾರೆ ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಕಾರ್ಯ ತತ್ಪರತೆ ಹಾಗೂ ಸ್ಪರ್ಧಾತ್ಮಕ ಯುಗದ ಪ್ರಚಲಿತವಿರುವ ವಿಷಯಗಳತ್ತ ಗಮನ ಹರಿಸಬೇಕು ಎಂದು ಸಲಹೆ‌ ನೀಡಿದರು.
ನಂತರ ಪೋತಲಕಟ್ಟಿ ಶಾಲೆಯ ಶಿಕ್ಷಕರಿಂದ ವಿಜಯನಗರ ಶಿಕ್ಷಕ‌ ರತ್ನ ಪ್ರಶಸ್ತಿ ಪುರಸ್ಕೃತ ತಿಮ್ಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಕುಮಾರಿ ಪಿ.ಲಕ್ಷ್ಮಿದೇವಿಯವರಿಗೆ  ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಬಿ.ಶಿವಯೋಗಿವಹಿಸಿದ್ದರು, ಶಿಕ್ಷಕರಾದ ಕೆ.ಅಶೋಕ ಕುಮಾರ್, ಎಂ.ಬಸವರಾಜ, ಅನಿತಾ.ಸಿ.ಆರ್. ರಾಮಮೂರ್ತಿ, ತುಳಸಮ್ಮ, ರಾಜಾಬಿ, ಶೃತಿ, ನಂದಿನಿ, ಬಿ.ಪರಶುರಾಮ ಹಾಗೂ ಇತರರು ಇದ್ದರು. ನಂತರ ಶಾಲೆಯ ಹಿರಿಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರಿಗೆ ಗೌರವಿಸುವುದರ ಮೂಲಕ ಗುರುನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸಿ.ಬಸಮ್ಮ, ಕೆ.ಬಿ.ಸ್ವಾತಿ ನಿರ್ವಹಿಸಿದರು.

Attachments area