ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ: ಬಿರಾದಾರ

ಬಾಗಲಕೋಟ, ಜ. 14 : ವಿಶ್ವದಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚುವ ಮೂಲಕ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿರುವ ಕೋವಿಡ್-19 ಕೋರೊನಾವನ್ನು ನಿಯಂತ್ರಣಕ್ಕೆ ರಾಜ್ಯ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಅವುಗಳನ್ನು ಶಿಕ್ಷಕರು, ಪಾಲಕರು ಚಾಚೂ ತಪ್ಪದೇ ಪಾಲಿಸುವ ಮೂಲಕ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಶಾಲೆಗೆ ಕಳುಹಿಸುವ ಕಾರ್ಯವನ್ನು ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ತಿಳಿಸಿದರು.
ಅವರು ನವನಗರದ ಸೆಕ್ಟರ್ ನಂ.38ರಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.8ರಲ್ಲಿ ಬಾಗಲಕೋಟ ತಾಲೂಕಿನ ಉರ್ದು ಶಾಲೆಗಳಿಗೆ ಉಚಿತ ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳ ವಿತರಣಾ ಸಮಾರಂಭ ಉದ್ದೇಶಿಸಿ ಮಾತನಾಡುತ್ತ ಮಹಾಮಾರಿ ಕೋರೊನಾ ಶಾಲೆಯೊಳಗೆ ನುಗ್ಗದಂತೆ ಎಸ್‍ಓಪಿ ಆದೇಶವನ್ನು ಪಾಲಿಸಬೇಕು ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬರುತ್ತಿದ್ದು ಅದಕ್ಕೆ ಪೂರಕವಾಗಿ ಶಿಕ್ಷಕರು ಕಾರ್ಯನಿರ್ವಹಿಸಬೇಕು ಅಲ್ಲದೇ ಅಲ್ಪಸಂಖ್ಯಾತ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಲು ಶ್ರಮ ವಹಿಸಬೇಕೆಂದು ತಿಳಿಸಿದರು.
ಅಲ್ಲದೇ ಇಂದು ಥರ್ಮಲ್ ಸ್ಕ್ರೀನಿಂಗ್ ಯಂತ್ರವನ್ನು ಈ ಶಾಲೆಯ ಮುಖ್ಯಗುರುಗಳಾದ ಎಂ.ಎ.ಸೌದಾಗರ ಅವರು ಸುಮಾರು 50ಸಾವಿರ ರೂ.ಗಳ ವೆಚ್ಚದಲ್ಲಿ ಇವುಗಳನ್ನು ವಿತರಿಸಿದ್ದು ಅವರು ಮಕ್ಕಳ ಬಗ್ಗೆ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ ಅವರ ಈ ಕಾರ್ಯ ಶ್ಲಾಘನೀಯವಾದ್ದದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಹಿರೇಮಠ ಮಾತನಾಡಿ ಮುಖ್ಯ ಶಿಕ್ಷಕ ಎಂ.ಎ.ಸೌದಾಗರ ಅವರು ಕೋರೊನಾ ಮಹಾಮಾರಿಯ ಬಗ್ಗೆ ತಿಳಿದುಕೊಂಡು ಈ ಕ್ರಮ ಕೈಗೊಂಡಿರುವ ಉತ್ತಮವಾದ್ದದು ಅವರು ಕೊಡಮಾಡಿರುವ ಸ್ಕ್ರೀನಿಂಗ್ ಯಂತ್ರಗಳ ಸದುಪಯೋಗವನ್ನು ತಾಲೂಕಿನ ಎಲ್ಲ ಉರ್ದು ಶಾಲೆಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸನ್ಮಾನ: ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ವತಿಯಿಂದ ಥರ್ಮಲ್ ಸ್ಕ್ರೀನಿಂಗ್ ಯಂತ್ರ ಕೊಡುಗೆ ನೀಡಿದ ಮುಖ್ಯಗುರು ಎಂ.ಎ.ಸೌದಾಗರ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಇಲಾಖೆಯ ಉರ್ದು ಶಿಕ್ಷಣ ಸಂಯೋಜಕ ಅಬ್ದುಲರಹಮಾನ ಬಿಳೆಕುದರಿ. ಬಿ.ಆರ್.ಸಿ ಎಚ್.ಕೆ.ಗುಡೂರ, ಅಕ್ಷರ ದಾಸೋಹ ಅಧಿಕಾರಿ ಅರಿಹಂತ ರಾಮತೀರ್ಥ, ಉರ್ದು ಸಿಆರ್‍ಪಿಗಳಾದ ಅಬ್ದುಲ್‍ಹಕ್ ಶೇಖ್, ಎಂ.ಎಂ.ಕಲಾದಗಿ, ಶಿಕ್ಷಕರ ಸಂಘದ ಎಲ್.ಸಿ.ಯಂಕಂಚಿ, ವೈ.ಡಿ.ಕಿರಸೂರ, ಎ.ಎಂ.ಮೋಮಿನ್, ಮುಸ್ಲಿಂ ನೌಕರ ಸಂಘದ ಅಧ್ಯಕ್ಷ ಆರ್.ಡಿ.ಅಂಗಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮವು ಕುರ್-ಆನ್ ಪಠಣದೊಂದಿಗೆ ಆರಂಭಗೊಂಡಿತು. ಐ.ಡಿ.ಅತ್ತಾರ ನಿರೂಪಿಸಿದರು.ಕೊನೆಗೆ ಆರ್.ಐ.ಹಣಗಿ ವಂದಿಸಿದರು.