ಶಿಕ್ಷಕರು ದೇಶ ಕಟ್ಟುವ ಶಿಲ್ಪಿಗಳು: ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.06:- ಶಿಕ್ಷಕರು ದೇಶ ಕಟ್ಟುವ ಶಿಲ್ಪಿಗಳು. ಶಿಕ್ಷಕರ ಪರಿಶ್ರಮವಿಲ್ಲದೆ ಉತ್ತಮ ಪ್ರಜೆಗಳ ನಿರ್ಮಾಣ ಅಸಾಧ್ಯ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ಮತ್ತು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುರುವಿನಲ್ಲೇ ಎಲ್ಲಾ ದೇವರನ್ನೂ ಕಾಣುವ ದಿನವೇ ಶಿಕ್ಷಕರ ದಿನಾಚರಣೆ. ಶಿಷ್ಯರ ಹಾಗೂ ಗುರುವಿನ ಸಂಬಂಧ ವೃದ್ದಿಸುವ ದಿನ, ನಮ್ಮೆಲ್ಲರನ್ನೂ ಸುಶಿಕ್ಷಿತ ಜೀವನಕ್ಕೆ ಮಾರ್ಗದರ್ಶಕರಾಗಿ ಮಾಡುವ ಪವಿತ್ರ ದಿನ. ಶಿಕ್ಷಕರು ಇಂದು ಆದರ್ಶ ಜೀವನ ಸಾಗಿಸುತ್ತಿದಾರೆ. ನಾನೂ ಸಹ ಟಿಸಿಹೆಚ್ ಮಾಡಿ ಶಿಕ್ಷಕನಾಗಲು ತಂದೆತಾಯಿಗಳ ಒತ್ತಡವಿತ್ತು. ಆದರೆ ಆಕಸ್ಮಿಕವಾಗಿ ಪದವಿಗೆ ಹೋಗಬೇಕಾಯಿತು. ಹಾಗಾಗಿ ಶಿಕ್ಷಕ ವೃತ್ತಿಗೆ ಹೋಗಲಾಗಲಿಲ್ಲ. ಶಿಕ್ಷಕ ಹುದ್ದೆ ಅಮೂಲ್ಯವಾದುದು. ಶಿಕ್ಷಕರ ವೃತ್ತಿ ಶ್ರೇಷ್ಠ ವೃತ್ತಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ನೆಚ್ಚಿನ ಶಿಕ್ಷಕರ ಪ್ರಭಾವಕ್ಕೆ ಒಳಗಾಗಿರುತ್ತಾನೆ. ಇದರಿಂದಾಗಿಯೇ ವ್ಯಕ್ತಿ ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದು ನಿಂತರು ತನಗೆ ಪಾಠ ಕಲಿಸಿದ ಶಿಕ್ಷಕರಿಗೆ ಸದಾ ಋಣಿಯಾಗಿರುತ್ತಾನೆ. ಶಿಕ್ಷಕರಿಗೆ ನೀಡುವ ಗೌರವ ಅಂತರಾಳದಿಂದ ಬರುತ್ತದೆ. ಆದ ಕಾರಣ ಶಿಕ್ಷಕರು ಆದರ್ಶ ಗುಣಗಳ ಗಣಿಗಳಾಗಿರಬೇಕು. ಶಿಕ್ಷಕರು ವೃತ್ತಿಗೌರವ ಹೆಚ್ಚಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶಕರಾಗಿರಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.
ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತಿದಾರರು ಹಾಗೂ ಪರಿವರ್ತನ ಶಾಲೆಯ ಡೀನ್ ಚೇತನ್ ರಾಮ್ ಮಾತನಾಡಿ ಶಿಕ್ಷಕ ವೃತ್ತಿಗೆ ಮಾದರಿಯಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸಿದರು. 27 ಬಾರಿ ನೊಬೆಲ್ ಪ್ರಶಸ್ತಿಗೆ ಶಿಫಾರಸುಗಳನ್ನು ಮಾಡಿದ್ದು ರಾಧಾಕೃಷ್ಣನ್ ಮಾತ್ರ. ರಷ್ಯಾದಲ್ಲಿ ಸ್ಟಾಲಿನ್ ಅವರಿಗೆ ಕ್ರೌರ್ಯ ನಿಲ್ಲಿಸಿ ಮಾನವೀಯತೆ ಮೆರೆಯುವಂತೆ ಸಲಹೆ ನೀಡಿ ಜಗತ್ತಿಗೇ ಮಾದರಿಯಾದವರು ರಾಧಾಕೃಷ್ಣನ್. ಅವರು ಸೇವೆಯಿಂದ ನಿವೃತ್ತರಾದಾಗ ಮೈಸೂರಿಲ್ಲಿ ವಿದ್ಯಾರ್ಥಿಗಳು ಸಾರೋಟು ಎಳೆದು ಬೀಳ್ಕೊಟ್ಟರು. ಭಾರತದ ಜನರಿಗೆ ಜ್ಞಾನದ ಹಸಿವನ್ನು ನೀಗಿಸಲು ಕ್ರಮ ಕೈಗೊಳ್ಳಲು ಸಲಹೆ ನೀಡಿದ ವ್ಯಕ್ತಿ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಸರ್ಕಾರಗಳು ವೇತನ ರೂಪದಲ್ಲಿ ಕೊಡುತ್ತಿರುವುದು ಕೇವಲ ಗೌರವಧನ ಮಾತ್ರ ಎಂದ ಚೇತನ್ ರಾಮ್ ಹಾಗಾಗಿ ಶಿಕ್ಷಕರನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ನಿವೃತ್ತರಾದ ಉಪನ್ಯಾಸಕರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಅಭಿನಂದಿಸಲಾಯಿತು.
ಪುರಸಭಾ ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ಗಾಯಿತ್ರಿ,ತಹಶೀಲ್ದಾರ್ ನಿಸರ್ಗಪ್ರಿಯ, ತಾಪಂ ಇಓ ಸತೀಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಕಾರ್ಯದರ್ಶಿ ಪಿ.ಜೆ.ಕುಮಾರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ಕಾರ್ಯದರ್ಶಿ ಲಕ್ಷ್ಮಣಗೌಡ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಕಾರ್ಯದರ್ಶಿ ವಿಜಿನಾರಾಯಣ, ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವೆಂಕಟೇಗೌಡ, ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕಿನ ಎಲ್ಲಾ ಶಾಲೆ ಕಾಲೇಜುಗಳು ಶಿಕ್ಷಕರು ಹಾಜರಿದ್ದರು.