ಶಿಕ್ಷಕರು ಜ್ಞಾನ ಪ್ರಸಾರದ ಪ್ರಾಥಮಿಕ ಮೂಲ: ಪ್ರೊ.ಎಸ್.ಬಿ.ರಂಗನಾಥ

ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೬: ಶಿಕ್ಷಕರು ಜ್ಞಾನ ಪ್ರಸಾರದ ಪ್ರಾಥಮಿಕ ಮೂಲವಾಗಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಿ ವೃತ್ತಿ ಕೌಶಲ ಮತ್ತು ಪರಿಣತಿಯನ್ನು ಪಡೆದು ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕು ಎಂದು ಸಿರಿಗೆರೆ ತರಳುಬಾಳು ಬೃಹನ್ಮಠದ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಬಿ.ರಂಗನಾಥ ಅಭಿಪ್ರಾಯಪಟ್ಟರು.ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ವತಿಯಿಂದ ಮಂಗಳವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ಶಿಕ್ಷಣ ತಜ್ಞರ ಜೀವನ ಮತು ಕೊಡುಗೆಯನ್ನು ಸ್ಮರಿಸುವ ದಿನವಾಗಿದೆ. ಶಿಕ್ಷಕರ ದಿನಾಚರಣೆಯು ಶಿಕ್ಷಕರಿಗೆ ಕೃತಜ್ಞತೆ ಮತ್ತು ಗೌರವವನ್ನು ವ್ಯಕ್ತಪಡಿಸುವ ಸಂದರ್ಭವಾಗಿದೆ. ಇದು ಬೋಧನೆಯನ್ನು ಉದಾತ್ತ ವೃತ್ತಿಯಾಗಿ ಪರಿಗಣಿಸಲು ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಕೊಡುಗೆಯಾಗಿದೆ ಎಂದು ಹೇಳಿದರು.ವೃತ್ತಿ ಮತ್ತು ಪ್ರವೃತ್ತಿಗಳು ಶಿಕ್ಷಕರನ್ನು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತವೆ. ಉತ್ತಮ ಶಿಕ್ಷಕರು ಬೋಧನಾ ವಿಧಾನಗಳನ್ನು ನಿರಂತರವಾಗಿ ನವೀಕರಿಸಿ, ಸಂಶೋಧನೆಗಳನ್ನು ಸಂಯೋಜಿಸಿಕೊಳ್ಳಬೇಕು. ಬದಲಾಗುತ್ತಿರುವ ತಂತ್ರಜ್ಞಾನ, ಶೈಕ್ಷಣಿಕ ಪ್ರವೃತ್ತಿಗಳಿಗೆ ಹೊಂದಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಬಕ್ಕಪ್ಪ  ಮಾತನಾಡಿ, ಶಿಕ್ಷಕರು ರೂಢಿಸಿಕೊಂಡ ಶ್ರದ್ಧೆ, ಪ್ರಾಮಾಣಿಕತೆ, ವೃತ್ತಿಪರತೆ ಮತ್ತು ಸೇವಾನಿಷ್ಠೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.