ಶಿಕ್ಷಕರು ಕೂಡ ಕೊರೊನಾ ವಾರಿಯರ್‌ಗಳು- ಶ್ಲಾಘನೆ

ಹೊಸಕೋಟೆ, ನ.೧೪-ಕರೋನಾ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಅಕ್ಷರ ಕಲಿಸಲು ಜಾರಿಗೆ ತಂದ ವಿದ್ಯಾಗಮ ಯೋಜನೆಗೆ ಜೀವದ ಹಂಗು ತೊರೆದು ಶಿಕ್ಷಕರು ಸಮರ್ಥವಾಗಿ ನಿಭಾಯಿಸಿ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಚೌಡೇಶ್ವರಿ ಕಲ್ಯಾಣಮಂಟಪದಲ್ಲಿ ತಾಲೂಕು ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕರೋನಾ ಸಂಧರ್ಭದಲ್ಲಿ ಸರ್ಕಾರ ಶಿಕ್ಷಕರನ್ನು ವಿದ್ಯಾಗಮ, ತಪಾಸಣೆ ಕೇಂದ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದುಡಿಸಿಕೊಂಡಿದ್ದು ಶಿಕ್ಷಕರೂ ಕೂಡ ನಿಜವಾದ ಕರೋನಾ ವಾರಿಯರ್ ಆಗಿದ್ದಾರೆ.
ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆರ್ಥಿಕವಾಗಿ ಅನುವಾಗಲೆಂಬ ದೃಷ್ಠಿಯಿಂದ ಪತ್ತಿನ ಸಹಕಾರ ಸಂಘ ತೆರೆಯಾಗಲಿದ್ದು, ಆರ್ಥಿಕ ನೆರವಿಗೆ ಸಹಕಾರಿಯಾಗಿದೆ. ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲು ಇಂತಹ ಸಂಘಗಳನ್ನು ಸ್ಥಾಪಿಸಲಾಗುತ್ತಿದ್ದು ಶಿಕ್ಷಕರು ಉಳಿತಾಯ ಮನೋಭಾವ ಬೆಳೆಸಿಕೊಳ್ಳುವುದರೊಂದಿಗೆ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಲ ಸೌಲಭ್ಯ ಸಹ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ತಾಲೂಕು ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ನಾರಾಯಣಸ್ವಾಮಿ ಮಾತನಾಡಿ ಪ್ರಸ್ತುತ ೩೫೦ ಷೇರುದಾರರನ್ನು ಹೊಂದಿದ್ದು ೧೩ ಲಕ್ಷ ರೂ.ಗಳ ಷೇರು ಸಂಗ್ರಹಣೆಗೊಂಡಿದೆ. ಎಲ್ಲಾ ಶಿಕ್ಷಕರು ಸಹ ಸಂಘದ ಸದಸ್ಯತ್ವ ಪಡೆದುಕೊಂಡು ಬಲಪಡಿಸಿದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲದಂತಹ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಲಿದೆ.
ಮುಂದಿನ ದಿನಗಳಲ್ಲಿ ಅಧಿಕ ಠೇವಣಿ ಸಂಗ್ರಹಣೆ ಮಾಡಿ, ಸಂಘವನ್ನು ಲಾಭಾಂಶದತ್ತ ಕೊಂಡೊಯ್ಯುವ ಮೂಲಕ ಶಿಕ್ಷಕರಿಗೆ ಅಗತ್ಯ ಸಾಲಸೌಲಭ್ಯ ವಿತರಣೆ ಮಾಡಲಾಗುವುದು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ್ ಗುರಿಕಾರ್, ಸಂಘದ ಉಪಾಧ್ಯಕ್ಷ ಬಸವರಾಜ್ ಸಂಗಣ್ಣ, ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಿ, ಯುವರಾಜ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಶಾಮಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜ್, ತಾಲೂಕು ಅಧ್ಯಕ್ಷ ಮುನಿರಾಜ್, ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ರಿಜ್ವನಾ, ಕಾರ್ಯದರ್ಶಿ ನಾರಾಯಣಸ್ವಾಮಿ ಇದ್ದರು.