ಶಿಕ್ಷಕರು ಕರ್ತವ್ಯಲೋಪ,ಕ್ರಮಕ್ಕೆ ಒತ್ತಾಯ

ರಾಯಚೂರು, ಜೂ.೧೬- ರಾಯಚೂರು ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವ ಮುಖ್ಯಗುರುಗಳು,ಶಿಕ್ಷಕರು ಮತ್ತು ಶಿಕ್ಷಕಿಯರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಸೈನ್ಯ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪಾಠ ಕಲಿಕೆಯಲ್ಲಿ ಮುಖ್ಯಗುರುಗಳು, ಶಿಕ್ಷಕರು ಮತ್ತು ಶಿಕ್ಷಕಿಯರು ಕರ್ತವ್ಯಲೋಪವೆಸಗಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರದೇ ಶೇ. ೭೦ ರಷ್ಟು ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ ಎಂದು ಆರೋಪಿಸಿದರು.
ಬಿ.ಇ.ಓ ಡಿ.ಡಿ.ಪಿ.ಐ. ಅವರು ೩ ತಿಂಗಳಿಗೊಮ್ಮೆ ಅಥವಾ ೬ ತಿಂಗಳಿಗೊಮ್ಮೆಯಾದರೂ ಪ್ರತಿ ಶಾಲೆಗೆ ಬೇಟಿ ನೀಡಿ ಪರಿಶೀಲಿಸಬೇಕು.ದೇಶದಲ್ಲಿ ಸರ್ಕಾರದ ಶಾಲೆಗಳು ಅಭಿವೃದ್ಧಿಯಾಗಬೇಕೆಂದು ಕೋಟ್ಯಾಂತರ ರೂಪಾಯಿಗಳ ಬಜೆಟ್ ಮಂಡನೆ ಮಾಡಿ ಜಾರಿಗೆ ಮಾಡುತ್ತಾರೆ. ಆದರೆ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದು ಸರ್ಕಾರಿ ಉದ್ಯೋಗ ಪಡೆಯುತ್ತಾರೆ. ಬಡವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿತು ಉದ್ಯೋಗವಿಲ್ಲದೇ ಬೀದಿಗಳಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಕೂಡಲೇ ಪರಿಸ್ಥಿತಿಗಳನ್ನು ತಡೆಗಟ್ಟಿ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಗುರುಗಳು, ಶಿಕ್ಷಕ-ಶಿಕ್ಷಕಿಯರ ಮೇಲೆ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸೂಕ್ತ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎ.ರಮೇಶ ವಡವಟ್ಟಿ,ಎಸ್.ವೆಂಕಟಸ್ವಾಮಿ,ಆಂಜಿನೇಯ ಅರಸಿಗೇರಿ,ಬೊಳಬಂಡಿ ವಾಡವಾಟಿ,ಬಾಬು ದೇವಿನಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.