ಶಿಕ್ಷಕರು ಅಧ್ಯಯನಶೀಲರಾಗಲಿ: ಸುರೇಶ ಚನಶೆಟ್ಟಿ

ಬೀದರ್:ಸೆ.10: ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ನಗರದ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗಳು, ಸುಲಭ ಹಾಗೂ ಸರಳ ಬೋಧನಾ ವಿಧಾನಗಳನ್ನು ಅರಿಯಬೇಕು. ಬೋಧನಾ ಕೌಶಲ ವೃದ್ಧಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.

ಶಿಕ್ಷಕರು ಮಾತ್ರ ಸುಂದರ ಹಾಗೂ ಸದೃಢ ದೇಶವನ್ನು ಕಟ್ಟಬಲ್ಲರು ಎಂದು ತಿಳಿಸಿದರು.

ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಶಿಕ್ಷಕ ವೃತ್ತಿ ಬಹಳ ಪವಿತ್ರವಾಗಿದೆ. ಕಾರಣ, ಶಿಕ್ಷಕರು ವೃತ್ತಿ ಗೌರವ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಋಷಿಕೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಮಣಗೇರೆ ಮಾತನಾಡಿ, ಪಾಲಕರ ನಂತರ ಗುರುವಿಗೆ ಶ್ರೇಷ್ಠ ಸ್ಥಾನ ಇದೆ. ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಶಕ್ತಿ ಶಿಕ್ಷಕರಿಗೆ ಇದೆ ಎಂದು ನುಡಿದರು.

ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಶಿಕ್ಷಕರಾದ ಸುನಿತಾ ಕಾಜಿ, ನೀಲಮ್ಮ ಗಜಲೆ, ಸುವರ್ಣಾ ಪಾಟೀಲ, ಸಪ್ನಾರಾಣಿ, ಸಾರಿಕಾ ಬಿರಾದಾರ, ಆಶಾ ಬಿ. ಪುರುಷೋತ್ತಮ, ಮಾರುತೆಪ್ಪ ಗೌನಳ್ಳಿ, ಪೂಜಾ ಕಡ್ಡೆ, ಚಂದ್ರಕಲಾ ಸ್ವಾಮಿ, ರೇಖಾ ಪಾಟೀಲ, ಪಾರ್ವತಿ ಬಿರಾದಾರ, ಮೇಘಾ ಕಾಜಿ, ಪೂಜಾ ರಾಣಿ, ಸುಧಾ ಉಪ್ಪೆ, ಅನುಸೂಯಾ, ಶೈಲಜಾ ಸ್ವಾಮಿ ಇದ್ದರು.

ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ ವಂದಿಸಿದರು.