ಬಂಗಾರಪೇಟೆ.ಸೆ೨೪:ಶಿಕ್ಷಣ ಎಂಬುದು ದ್ವಿಮುಖ ಹಾದಿಯಲ್ಲಿ ಸಾಗುವಂತಹುದು ಶಿಕ್ಷಕರು ಹಾಗೂ ಅಧಿಕಾರಿಗಳ ನಡುವ ಪರಸ್ಪರ ಉತ್ತಮ ಸಹಕಾರ, ಬಾಂಧವ್ಯ, ಅನ್ಯೋನತೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ.ಎಂದು ನಿಕಟಪೂರ್ವ ಸಮನ್ವಯ ಅಧಿಕಾರಿ ಬಿ.ಎಂ.ರಾಧಮ್ಮ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಗಾಜಗ ಕ್ಲಸ್ಟರ್‌ನ ತುಮಟಗೆರೆ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಒಂದು ದೇಶದ ಭವಿಷ್ಯ ಅಲ್ಲಿನ ಅಕ್ಷರಸ್ತ ಸಮಾಜವನ್ನು ಅವಲಂಬಿಸಿದೆ. ಈ ಹಿನ್ನಲೆಯಲ್ಲಿ ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕರ್ತವ್ಯ ಪಾಲನೆ ಮಾಡಿದ್ದೇ ಆದಲ್ಲಿ ದೇಶವು ವಿಶ್ವದ ಪುಟದಲ್ಲಿ ಅಜರಾಮರವಾಗುತ್ತದೆ ಎಂದರು.
ಈ ವೇಳೆ ಹೋಬಳಿ ಮಟ್ಟದ ನಾಲ್ಕು ಕ್ಲಸ್ಟರ್‌ಗಳಾದ ಗುಲ್ಲಹಳ್ಳಿ, ಬೂದಿಕೋಟೆ, ಎಳೇಸಂದ್ರ, ಗಾಜಗ ಸೇರಿ ಆರು ವರ್ಷಗಳ ಕಾಲ ಸುದೀರ್ಘವಾಗಿ ಕ್ಷೇತ್ರ ಸಮನ್ವಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಕೋಲಾರ ಬಾಲಕರ ಕಾಲೇಜುನಲ್ಲಿ ಉಪಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎಂ.ರಾಧಮ್ಮ ರವರನ್ನು ತಾಲ್ಲೂಕು ಸಮನ್ವಯ ಅಧಿಕಾರಿಗಳಾದ ಶಶಿಕಲಾ ಹಾಗೂ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.
ಸಮನ್ವಯ ಅಧಿಕಾರಿ ಶಶಿಕಲಾ ಮಾತನಾಡಿ, ರಾಧಮ್ಮನವರ ಸೇವೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ. ಅವರ ಕಾಲಾವಧಿಯಲ್ಲಿ ಇಡೀ ತಾಲೂಕಿನಾದ್ಯಂತ ಶಿಕ್ಷಕರಿಗೆ ಅನೇಕ ಸಲಹೆ ಮಾರ್ಗದರ್ಶನ ಹಾಗೂ ಶೈಕ್ಷಣಿಕವಾಗಿ ಕಲಿ-ನಲಿ ವಿಷಯಗಳ ಬಗ್ಗೆ ಹಲವು ಯೋಜನೆಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟು ಅಗತ್ಯವಾಗಿ ಬೇಕಾಗಿರುವಂತಹ ಸಮರ್ಪಕ ತರಬೇತಿಗಳನ್ನು ಒಳಗೊಂಡಂತೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶ್ಯಾಮಮೂರ್ತಿ, ಸರ್ಕಾರಿ ನೌಕರರ ಸಂಘದ ಖಜಾಂಚಿಗಳಾದ ಟಿ.ವೆಂಕಟೇಶಪ್ಪ, ಎಸ್‌ಸಿ.ಎಸ್ಟಿ ಪ್ರಾಥಮಿಕ ಶಿಕ್ಷಕರ ಸಂಘ ಅಧ್ಯಕ್ಷರಾದ ಬಿ.ನಾರಾಯಣಸ್ವಾಮಿ, ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಂ.ಶ್ರೀನಿವಾಸ್‌ಮೂರ್ತಿ, ಬಿಆರ್‌ಪಿಗಳಾದ ಕೆ.ಮುನಿರಾಜು, ಸಿಆರ್‌ಪಿಗಳಾದ ನಾಗರಾಜ್, ಎಂ.ಎಸ್.ಶ್ರೀನಿವಾಸ ಮಾಗೇರಿ ಮತ್ತು ಎಸ್.ರಾಜಪ್ಪ ಹಾಗೂ ನಾಲ್ಕು ಕ್ಲಸ್ಟರ್ ಶಿಕ್ಷಕರುಗಳು ಈ ಭಾಗವಹಿಸಿದ್ದರು.