ಶಿಕ್ಷಕರಿಗೆ ಸೇವಾದಳ ಪುನಶ್ಚೇತನ ಕಾರ್ಯಾಗಾರ

ಕೋಲಾರ,ಆ,೧೧- ತಮ್ಮದೇ ರಾಷ್ಟ್ರದ ಚಿಹ್ನೆ, ಧ್ವಜದ ಅಡಿಯಲ್ಲಿ ಹೋರಾಟಗಳನ್ನು ನಡೆಸುವ ಮೂಲಕ ಭಾರತೀಯರ ಸಾರ್ವಭೌಮತೆ, ಐಕ್ಯತೆ, ಘನತೆ ಗೌರವದ ಸಂಕೇತವಾಗಿ ಗಣರಾಜ್ಯೋತ್ಸವ ಸ್ವಾತಂತ್ರ್ಯದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಧ್ವಜ ಕುರಿತಂತೆ ಪ್ರತಿ ಮಕ್ಕಳಿಗೂ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ರಾಷ್ಟ್ರಧ್ವಜ ಕುರಿತಂತೆ ಪ್ರತಿಯೊಂದು ಮಾಹಿತಿಯನ್ನು ಹೊಂದುವುದು ಶಿಕ್ಷಕರ ಕರ್ತವ್ಯವಾಗಿದೆ, ಆ ಮಾಹಿತಿಯನ್ನು ಭಾರತ ಸೇವಾದಳವು ನೀಡುತ್ತದೆ ಎಂದು ತಿಳಿಸಿದರು.
ದೇಶದ ಗಣ್ಯ ವ್ಯಕ್ತಿಗಳು ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಇತರರು ಹೊರದೇಶಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಗೌರವ ಸೂಚಿಸುತ್ತಾರೆ. ಕ್ರೀಡಾಪಟುಗಳು ಜಯಶಾಲಿಯಾದಾಗ ಭಾರತ ಧ್ವಜದೊಂದಿಗೆ ಭಾರತದ ಹಿರಿಮೆಯನ್ನು ಹೆಚ್ಚಿಸುತ್ತಾರೆ. ಆ ಘನತೆ ರಾಷ್ಟ್ರದ ಧ್ವಜದಿಂದ ದೊರಕುತ್ತದೆ ಎಂದರು.
ಪ್ರತಿ ಶಾಲೆಗೆ ರಾಷ್ಟ್ರಧ್ವಜಸಂಹಿತೆ ಕುರಿತಂತೆ ಭಾರತ ಸೇವಾದಳ ಪ್ರಕಟಿಸಿರುವ ಪುಸ್ತಕಗಳನ್ನು ತಪ್ಪದೇ ವಿತರಿಸಲಾಗುವುದು ಎಂದು ನುಡಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ ದಿನ ಪ್ರತಿ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ವ್ಯವಸ್ಥಿತವಾಗಿ ಹಾರಿಸಬೇಕು. ಸರಿಯಾದ ವ್ಯವಸ್ಥೆಯಲ್ಲಿ ಬಾವುಟ ಹಾರಿಸದಿದ್ದರೆ ಸೇವೆಯಿಂದ ಅಮಾನತು ಆಗುವುದು ಖಚಿತ. ಪ್ರತಿನಿತ್ಯ ಪಾಠ ಮಾಡಿ ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ, ಬುದ್ದಿ ಹೇಳುವ ಶಿಕ್ಷಕರು ಧ್ವಜಕ್ಕೆ ನೀಡುವ ಗೌರವವನ್ನು ಅರಿಯಬೇಕುಎಂದು ತಿಳಿಸಿದರು.
ಇಡೀ ಭಾರತಕ್ಕೆ ಖಾದಿ ಬಟ್ಟೆಯಲ್ಲಿ ರಾಷ್ಟ್ರಧ್ವಜವನ್ನು ನೆಯ್ದು ನೀಡುತ್ತಿರುವ ರಾಷ್ಟ್ರಧ್ವಜ ನಿರ್ಮಾಣದ ೫೦ ಸಂಘಟನೆಗಳು ಕರ್ನಾಟಕ ರಾಜ್ಯದ ಧಾರವಾಡ, ಹುಬ್ಬಳ್ಳಿಯಲ್ಲಿದೆ. ಅವರಿಗೆ ಜೀವನ ನಡೆಸಲು ಕಷ್ಟವಾಗಿದೆ, ಸರಿಯಾದ ಸಬ್ಸಿಡಿ, ಕಚ್ಚಾ ಸಾಮಗ್ರಿಗಳ ಪೂರೈಕೆ ಇಲ್ಲದೆ. ಇಡೀ ರಾಷ್ಟ್ರಕ್ಕೆ ಧ್ವಜಗಳನ್ನು ಪೂರೈಸಲು ಆಗುತ್ತಿಲ್ಲವೆಂದು ತಿಳಿಸಿದರು.
ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಇಂದಿನ ಪೀಳಿಗೆ ಮಕ್ಕಳಿಗೆ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಹೋರಾಟಗಾರರ, ಬಲಿದಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ರಾಷ್ಟ್ರಕ್ಕೆ ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನು ಮಕ್ಕಳಿಗೆ ತಿಳಿಸಬೇಕು ಆಚರಿಸಲು ಸೂಚಿಸಬೇಕು. ಭಾರತ ಸೇವಾದಳವು ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ಪೂರೈಸಿಕೊಂಡು ಬರುತ್ತಿದೆ ಎಂದರು.
ಭಾರತ ಸೇವಾದಳ ರಾಜ್ಯ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜ ಕಟ್ಟುವ, ಮಡಚುವ, ಹಾರಿಸುವ ಸಮಯದಲ್ಲಿ ಯಾವಗೀತೆ ಹಾಡಬೇಕು ಹಾಗೂ ಇಳಿಸುವ ಸಮಯದಲ್ಲಿ ಯಾವ ಗೀತೆ ಹಾಡಬೇಕು ಎಂಬ ವಿಧಾನಗಳ ಕುರಿತು ಪ್ರತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಗೌರವಾಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ, ಬಹದ್ದೂರ್ ಸಾಬ್, ಚಾಮುಂಡೇಶ್ವರಿ, ಸರಸ್ವತಮ್ಮ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ದಾನೇಶ್ ನಿರೂಪಿಸಿ, ಶ್ರೀರಾಮ್ ಸ್ವಾಗತಿಸಿ, ಶ್ರೀನಿವಾಸಮೂರ್ತಿ ವಂದಿಸಿದರು.