ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆ ಸ್ವಾಗತಾರ್ಹ: ಸಂಕನೂರ


ಧಾರವಾಡ,ಜೂ.4-ಕಳೆದ 15 ತಿಂಗಳುಗಳಿಂದ ಕೊರೋನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2ಲಕ್ಷ ಸಿಬ್ಬಂದಿಗೆ, ಪ್ರತಿ ಶಿಕ್ಷಕರಿಗೆ ರೂ. 5000 ಪ್ಯಾಕೇಜ್‍ನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದು ಅತ್ಯಂತ ಶ್ಲ್ಯಾಘನೀಯ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಒಂದು ಪ್ಯಾಕೇಜ್ ಘೋಷಣೆ ಮಾಡುವಲ್ಲಿ ಅತ್ಯಂತ ಪರಿಶ್ರಮಪಟ್ಟಿರುವ ಶಿಕ್ಷಕರ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಎಸ್. ಸುರೇಶಕುಮಾರ ಅವರಿಗೆ ಮತ್ತು ಇದಕ್ಕೆ ಸಹಕಾರ ನೀಡಿದ ಆರ್ಥಿಕ ಇಲಾಖೆ, ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಅದೇ ರೀತಿ ಶಿಕ್ಷಣ ಇಲಾಖೆಯ ಆಯುಕ್ತರು, ನಿರ್ದೇಶಕರು ಅಭಿನಂದನಾರ್ಹರು.
ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆ ಮಾಡುದರ ಜೊತೆಗೆ ಮೀನುಗಾರರಿಗೆ, ಆಶಾಕಾರ್ಯಕರ್ತರಿಗೆ, ಅಂಗನವಾಡಿ ಸಹಾಯಕರಿಗೆ, ಮುಜರಾಯಿ ಅರ್ಚಕರಿಗೆ, ಪವರ್ ಲೂಮ್ ನೇಕಾರರಿಗೆ, ಹಾಗೂ ಸಿನಿ ಕಾರ್ಯಕರ್ತರಿಗೂ ಕೂಡ ಮುಖ್ಯಮಂತ್ರಿಗಳು ಕೊರೋನಾ ಕಷ್ಟ ಕಾಲದಲ್ಲಿ 2ನೇ ಪ್ಯಾಕೇಜ್ ಘೋಷಣೆ ಮಾಡಿದ್ದು ಸ್ವಾಗತಾರ್ಹ ಎಂದು ಎಸ್.ವಿ. ಸಂಕನೂರ ಅವರು ತಿಳಿಸಿದ್ದಾರೆ.