ಶಿಕ್ಷಕರಿಗೆ ನಮಿಸಿದ ವಿದ್ಯಾರ್ಥಿ ವೃಂದ

ಸಂಜೆವಾಣಿ ವಾರ್ತೆ
ಔರಾದ್ : ಫೆ.25:ಶಾಲೆಯ ಒಂದೇ ಬೆಂಚಲ್ಲಿ ಕುಳಿತು ಓದಿ ಸುಮಾರು ವರ್ಷಗಳ ನಂತರ ಸ್ನೆ?ಹಿತರನ್ನು ನೋಡುವ ಭಾಗ್ಯ ಅನೇಕರಿಗೆ ಸಿಕ್ಕಿತು. ಗುರು ಶಿಷ್ಯರು, ಕಿರಿಯ ಹಿರಿಯರು ಹಾಗೂ ಗೆಳೆಯ ಗೆಳತಿಯರ ಸಮಾಗಮವಾಯಿತು. ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾ ಹಿರಿಯ ವಿದ್ಯಾರ್ಥಿಗಳು ಪಾಠ ಕಲಿಸಿದ ಗುರುಗಳಿಗೆ ನಮಿಸಿ ಧನ್ಯತಾ ಭಾವ ಮೆರೆದದ್ದು ಭಾವಲೋಕದ ಬಾಗಿಲು ತೆರೆದಂತಾಗಿತ್ತು.
ಹೌದು, ತಾಲೂಕಿನ ಸಂತಪೂರ ಗ್ರಾಮದ ಸುಭಾಷ ಚಂದ್ರ ಬೋಸ್ ಶಾಲೆಯಲ್ಲಿ ಶನಿವಾರ ನಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ಈ ಅಮೃತ ಘಳಿಗೆಗೆ ಸಾಕ್ಷಿಯಾಗಿತ್ತು, ನಾನಾಕಡೆಯಿಂದ ಬಂದಿದ್ದ ಹಿರಿಯ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಅಧಿಕಾರಿಗಳಾಗಿ, ರಾಜಕೀಯ ನಾಯಕರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿರುವವರು ಭಾಗವಹಿಸುವ ಮೂಲಕ ಸಾರ್ಥಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವಿದ್ಯೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ತೆರೆದ ಸಾರೋಟಿನಲ್ಲಿ ಮೆರವಣಿಗೆ ನಡೆಸಿದರು. ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಶಿವರಾಜ ಜುಲಾಂಡೆ, ಜಗನ್ನಾಥ ಧುಮ್ಮನಸುರೆ, ಶಾಲಿವಾನ ಪನ್ನಾಳೆ, ಚಂದ್ರಮತಿ, ಮಾರುತಿ ಉತ್ತಮ, ಶಿಕ್ಷಕರಾದ ಗುರುನಾಥ ದೇಶಮುಖ, ನಂದಾದೀಪ ಬೋರಾಳೆ, ನಿವೃತ್ತ ಪ್ರಥಮ ದರ್ಜೆ ಸಹಾಯಕ ಗುರುಲಿಂಗಯ್ಯ ಸ್ವಾಮಿ, ನಿವೃತ್ತ ಅಟೆಂಡರ್ ಸಿದ್ದಯ್ಯ ಸ್ವಾಮಿ, ನಿವೃತ್ತ ಸಹಾಯಕ ಬಸಯ್ಯ ಸ್ವಾಮಿ ಅವರಿಗೆ ಗುರು ವಂದನಾ ಸಲ್ಲಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು ಮಾತನಾಡಿ ಸಂಸ್ಥೆ ಆರಂಭವಾಗಿ ಸುಮಾರು 40 ವರ್ಷವಾಗಿದ್ದು, ಎಲ್ಲ ಹಳೆಯ ವಿದ್ಯಾರ್ಥಿಗಳಿಗೆ ಆಹ್ವಾನಿಸುವ ಕಾರ್ಯ ಅದ್ಭುತವಾಗಿದೆ. ಇಂತಹ ಕಾರ್ಯಕ್ರಮ ಮಾಡಿರುವ ಹಳೆ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಬೇಕು, ನಿಸ್ವಾರ್ಥ ಸೇವೆ ಕನಸು ಹೊತ್ತ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಕರ ಜೊತೆ ಇಂದಿನ ವಿದ್ಯಾರ್ಥಿಗಳು ಜೊತೆಗೂಡಿದರೆ ಶಿಕ್ಷಣದ ಪ್ರಕ್ರಿಯೆ ಯಶಸ್ವಿಯಾಗಲು ಸಾಧ್ಯ, ಸುಭಾಷ ಚಂದ್ರ ಭೋಸ್ ಶಾಲೆಯಲ್ಲಿ ನಡೆಯುತ್ತಿರುವ ಹಳೆ ವಿದ್ಯಾರ್ಥಿಗಳ ಸಮ್ಮೇಳನ ಮತ್ತು ಗುರುವಂದನಾ ಕಾರ್ಯಕ್ರಮ ಇಡೀ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮವಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಶಿವಾಜಿರಾವ ಬೋರಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಾಲೆಯ ಮುಖ್ಯಗುರು ಮನೋಹರ ಬಿರಾದಾರ್ ಪ್ರಾಸ್ತವಿಕ ಮಾತನಾಡಿದರು. ಯಾದಗಿರಿ ವಾಣಿಜ್ಯ ತೆರೆಗೆ ಇಲಾಖೆಯ ಅಧಿಕಾರಿ ಖಾಜಾ ಖಲೀಲುಲ್ಲಾ ಪ್ರೇರಣಾ ನುಡಿ ನುಡಿದರು. ಸುರೇಶ ಮಹಾರಾಜ, ಹಳೆ ವಿದ್ಯಾರ್ಥಿಗಳ ಸಮನ್ವಯ ಸಮಿತಿ ಅಧ್ಯಕ್ಷ ಸಂತೋಷ ಪಾಟೀಲ್, ಮಾಜಿ ಗ್ರಾಪಂ ಅಧ್ಯಕ್ಷ ಶರಣಬಸವಪ್ಪ ಬಿರಾದಾರ್, ನ್ಯಾಯವಾದಿ ಧನರಾಜ ಬಿರದಾರದ, ಡಾ. ನಾಗನಾಥ ಕೌಟಗೆ, ಜಾರ್ಜ್ ಬುಷ್, ಮಂಜು ಸ್ವಾಮಿ, ಅಶೋಕ ಶೆಂಬೆಳ್ಳಿ, ಸೇರಿದಂತೆ ಅನೇಕರಿದ್ದರು.
ಹÀಳೆ ವಿದ್ಯಾರ್ಥಿ ರತಿಕಾಂತ ಜೋಜನಾ ಸ್ವಾಗತಿಸಿದರು. ನಾಗಯ್ಯ ಸ್ವಾಮಿ, ಗಫರ್ ಪಾಷಾಮಿಯ್ಯ ನಿರೂಪಿಸಿದರು. ಈ ವೇಳೆ ನಾಗೇಶ ಸ್ವಾಮಿ ಮಸ್ಕಲ್ ಅವರು ರಚಿಸಿರುವ ಗುರು ವಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.

ಭೂ ದಾನಿಗಳಿಗೆ ಸತ್ಕಾರ

ಸುಭಾಷ ಚಂದ್ರ ಬೋಸ್ ಶಾಲೆಗೆ ಭೂ ದಾನ ಮಾಡಿರುವ ಬಸಯ್ಯ ಸ್ವಾಮಿ, ಸಂಗಯ್ಯ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿದರು. ಶಿಕ್ಷಣಕ್ಕಾಗಿ ಭೂ ದಾನ ಮಾಡಿರುವುದು ಶ್ಲಾಘನೀಯ ಎಂದು ಭಾಲ್ಕಿ ಶ್ರೀಗಳಾದ ಗುರುಬಸವ ಪಟ್ಟದ್ದೇವರು ಮೆಚ್ಚುಗೆ ವ್ಯಕ್ತಪಡಿಸಿದರು.