ಶಿಕ್ಷಕರನ್ನು ಹೆಚ್ಚಿನ ಜ್ಞಾನಾಸಕ್ತರನ್ನಾಗಿಸುವುದು ರಾಯಚೂರು ವಿಶ್ವವಿದ್ಯಾಲಯದ ಪ್ರಯತ್ನ

ರಾಯಚೂರು,ಸೆ.೪- ಪ್ರಸ್ತುತ ಕಾಲಾಮಾನದಲ್ಲಿ ಶಿಕ್ಷಣ ಎಂದರೆ ಮಕ್ಕಳಿಗೆ ನಿರಾಸಕ್ತಿ ಮೂಡುತ್ತಿದೆ ಇದಕ್ಕೆ ಮುಖ್ಯ ಕಾರಣ ಶಿಕ್ಷಕರು ಮಕ್ಕಳನ್ನು ತಮ್ಮ ತರಗತಿಯೆಡೆಗೆ ಪಾಠದೆಡೆಗೆ ಮೌಲ್ಯಜ್ಞಾನದೆಡೆಗೆ ಕರೆತರುವಲ್ಲಿ ವಿಫಲವಾಗುತ್ತಿರುವುದು ಈ ನಿಟ್ಟಿನಲ್ಲಿ ಶಿಕ್ಷಕರು ಮುಂದಿನ ಪೀಳಿಗೆಯನ್ನು ಹೇಗೆ ಬೆಳೆಸಬೇಕು ಎಂಬ ಅರಿವಿನಿಂದ ಮಕ್ಕಳಿಗೆ ಉಪಯೋಗವಾಗುವ ಸಮಾಜಕ್ಕೆ ಉಪಯುಕ್ತವಾದ ಉತ್ತಮ ಶಿಕ್ಷಣ ನೀಡಲು ಕೌಶಲ್ಯಾಧಾರಿತ ಶಿಕ್ಷಣ ಕಲಿಯುವ ಕಲಿಸುವ ಪ್ರಸ್ತುತತೆ ಮತ್ತು ಅವಶ್ಯಕತೆ ಇದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಹರೀಶ ರಾಮಸ್ವಾಮಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಯಚೂರು ವಿಶ್ವವಿದ್ಯಾಲಯವು ಕೆಎಸ್‌ಡಿಸಿ (ಕರ್ನಾಟಕ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್) ಮತ್ತು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ಸಹಯೋಗದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಸೆಪ್ಟಂಬರ್ ೦೪ ರಿಂದ ೧೬ ರವರೆಗೆ ನಡೆಯುವ ಎಫ್‌ಡಿಪಿ (ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿಕ್ಷಕರು ಸ್ವ-ಅಭಿವೃದ್ಧಿಯಾಗುವ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೈಯುತ್ತಾ ಸಮಾಜದ ಅಭಿವೃದ್ಧಿಯನ್ನು ಮಾಡಬೇಕು ಶಿಕ್ಷಕರಿಗೆ ಅನುಕೂಲವಾಗುವ ರೀತಿಯಲ್ಲಿ ರಾಯಚೂರು ವಿಶ್ವವಿದ್ಯಾಲಯ ಆಯೋಜಿಸಿರುವ ಹದಿನೈದು ದಿನಗಳ ಬೋಧಕ ಅಭಿವೃದ್ಧಿ ಕಾರ್ಯಕ್ರಮದ ಲಾಭವನ್ನು ಶಿಕ್ಷಕರು ಪಡೆದುಕೊಳ್ಳಬೇಕೆಂದು ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ರಾವಿವಿ ಕುಲಸಚಿವರಾದ ಪ್ರೊ.ವಿಶ್ವನಾಥ ಎಂ. ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಭಿನ್ನವಾಗಿ, ಮುಖ್ಯವಾಗಿ ಸೈದ್ಧಾಂತಿಕ ಜ್ಞಾನ ಮತ್ತು ಮಾಹಿತಿಯನ್ನು ಪಡೆದುಕೊಳ್ಳುವುದನ್ನು ಕೌಶಲ್ಯಾಧಾರಿತ ಶಿಕ್ಷಣವು ಕಲಿಸುತ್ತದೆ. ವಿದ್ಯಾರ್ಥಿಗಳಿಗೆ ಬರೆಯುವ, ಮಾತನಾಡುವ, ಓದುವ, ಕೇಳುವ ಜ್ಞಾನವನ್ನು ನೀಡಬೇಕಾಗಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮಧ್ಯೆ ಸಂಪರ್ಕ ಎಂಬುದು ಅತಿ ಅಗತ್ಯ. ಶಿಕ್ಷಣದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಬದಲಾಗುತ್ತಿರುವ ವಿದ್ಯಾರ್ಥಿಗಳ ಆಸಕ್ತಿಯನ್ನು ಅರಿತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕೌಶಲ್ಯ ಕೂಡ ನೀಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಆ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡುವಂತಹ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ರಾಯಚೂರು ವಿಶ್ವವಿದ್ಯಾಲಯ ಸದಾ ಸಿದ್ಧ ಎಂದು ಹೇಳುತ್ತಾ ಸ್ವಾಗತಿಸಿದರು.