ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೨೫: ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಪರೋಕ್ಷವಾಗಿ ಮಾಡುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರೆ, ಅದು ಸಮಾಜವನ್ನು ಗೌರವಿಸಿದಂತೆ ಎಂಬ ಶ್ಲಾಘನೀಯ ನುಡಿಗಳನ್ನು ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಆಡಿದರು.ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ನೇಷನ್ ಬಿಲ್ಡರ್ ಅವಾರ್ಡ್’ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುಟುಂಬ ಹಾಗೂ ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಒಂದು ದೇಶದ ಅಭಿವೃದ್ಧಿಯ ಪಥವನ್ನು ಸಾಕ್ಷರತೆಯ ಮಟ್ಟದ ಮೂಲಕವೂ ಪರಿಗಣಿಸುತ್ತಾರೆ. ದೇಶದ ಭಾವಿ ಪ್ರಜೆಗಳನ್ನು ತಯಾರು ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದರು.ರೋಟರಿ ಕ್ಲಬ್ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. ಅದರ ಒಂದು ಭಾಗವಾಗಿ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.ರೋಟೇರಿಯನ್ ಮಧು ಪ್ರಸಾದ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಅಂತಹ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಎನ್.ಕೆ. ರವೀಂದ್ರ ಕ್ಲಬ್ ನಡೆದು ಬಂದ ಹಾದಿಯನ್ನು ತಿಳಿಸಿದರು. ಅಸಿಸ್ಟೆಂಟ್ ಗೌವರ್ನರ್ ಉಮೇಶ್ ವಿ. ತುಪ್ಪದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಗಿರೀಶ್ ವಹಿಸಿದ್ದರು. ಶಶಿಧರ್ ಗುಪ್ತ, ಸುಧಾ ಗೋವಿಂದರಾಜು, ನಂದಿನಿ ರಾಘವೇಂದ್ರ ಉಪಸ್ಥಿತರಿದ್ದರು.ಎಮ್ಮೆಹಟ್ಟಿ ಶಾಲಾ ಶಿಕ್ಷಕಿ ಎಸ್. ಶಶಿಕಲಾ ಪ್ರಾರ್ಥಿಸಿದರು. ರಾಘವೇಂದ್ರ ಸ್ವಾಗತಿಸಿದರು. ಸುಧಾ ರಾಘವೇಂದ್ರ ವಂದಿಸಿದರು. ಸರಿತಾ ನಿರೂಪಿಸಿದರು.