ಶಿಕ್ಷಕರನ್ನು ಅನ್ಯಕಾರ್ಯಗಳಿಗೆ ಬಳಸದಂತೆ ಸುತ್ತೋಲೆಗೆ ಆಗ್ರಹ

ಕೋಲಾರ, ಆ. ೨೯- ರಾಜ್ಯದ ಶೇ.೬೦ ಶಿಕ್ಷಕರು ರಕ್ತದೊತ್ತಡ,ಮಧುಮೇಹ ಮತ್ತಿತರ ಕಾಯಿಲೆಗಳಿಗೆ ತುತ್ತಾಗಿರುವ ಕುರಿತ ಸಮೀಕ್ಷಾ ವರದಿ ಆತಂಕಕಾರಿಯಾಗಿದ್ದು, ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಹೊರತುಪಡಿಸಿ ಅನ್ಯಕಾರ್ಯಗಳಿಗೆ ಬಳಸಿಕೊಳ್ಳದೇ ಒತ್ತಡಮುಕ್ತರಾಗಿಸಲು ಕೂಡಲೇ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಹಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು ನೀಡಿದ ಅಭಿನಂದನೆ ಸ್ವೀಕರಿಸಿ, ಶಿಕ್ಷಕರು,ಉಪನ್ಯಾಸಕರಿಂದ ಕುಂದುಕೊರತೆ ಆಲಿಸಿ ಅವರು ಮಾತನಾಡುತ್ತಿದ್ದರು.
ಸಮೀಕ್ಷೆ ನೀಡಿರುವ ವರದಿಯ ಅರ್ಥ ಶಿಕ್ಷಕರು ಒತ್ತಡದಲ್ಲಿದ್ದಾರೆ ಎಂಬುದೇ ಆಗಿದೆ, ಇವರನ್ನು ಜನಗಣತಿ, ಜಾತಿ ಗಣತಿ,ಮತದಾರರ ಪಟ್ಟಿ ಪರಿಷ್ಕರಣೆ, ಆಧಾರ್‌ಲಿಂಕ್ ಮತ್ತಿತರ ಕಾರ್ಯಗಳಿಗೆ ನಿಯೋಜಿಸುವ ಮೂಲಕ ಒತ್ತಡಕ್ಕೆ ಸಿಲುಕುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಶಿಕ್ಷಕರು ಒತ್ತಡದಲ್ಲಿದ್ದರೆ ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರವೇ ಬಳಸಿಕೊಳ್ಳುವಂತಾಗಬೇಕು ಈ ಸಂಬಂಧ ಶಿಕ್ಷಣ ಸಚಿವರ ಗಮನ ಸೆಳೆಯುವುದಾಗಿ ತಿಳಿಸಿದರು.
ಕನ್ನಡ ಶಾಲೆ ಉಳಿಸುವ ಅಭಿಯಾನದಡಿ ಹೋರಾಟ ನಡೆಯುತ್ತಿದೆ, ಈ ಹಿನ್ನಲೆಯಲ್ಲಿ ೧೯೯೪-೯೫ರ ನಂತರ ಪ್ರಾರಂಭಗೊಂಡಿರುವ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆರೋಗ್ಯದ ದೃಷ್ಟಿಯಿಂದ ಸರ್ಕಾರಿ,ಖಾಸಗಿ,ಅನುದಾನಿತ ಎಲ್ಲಾ ಶಿಕ್ಷಕರಿಗೆ ಆಯುಷ್ಮಾನ್‌ಭಾರತ್ ಆರೋಗ್ಯ ಕಾರ್ಡ್ ಒದಗಿಸಬೇಕು, ಉಚಿತ ಆರೋಗ್ಯ ತಪಾಸಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಈ ಬಾರಿಯ ಸದನ ಸೆ.೧೨ ರಿಂದ ಆರಂಭಗೊಳ್ಳುತ್ತಿದ್ದು, ಈ ಸದನದಲ್ಲಿ ನೂತನ ಪಿಂಚಣಿ ಪದ್ದತಿ ತೆಗೆದು ಹಳೆ ಪಿಂಚಣಿ ಪದ್ದತಿ ಜಾರಿ, ವರ್ಗಾವಣೆ ಕಾಯಿದೆಯಲ್ಲಿನ ಲೋಪದೋಷ ನಿವಾರಣೆ, ಬಡ್ತಿ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರು, ಪ್ರೌಢಶಾಲಾ ವೃತ್ತಿ ಶಿಕ್ಷಕರಸಮಸ್ಯೆಗಳು, ಪಿಯುಸಿ ಉಪನ್ಯಾಸಕರ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ನೇತೃತ್ವದಲ್ಲಿ ಎಲ್ಲಾ ಪದವೀಧರ, ಶಿಕ್ಷಕರ ಕ್ಷೇತ್ರದ ಎಂಎಲ್‌ಸಿಗಳ ಸಭೆ ಕರೆದು ಈ ಎಲ್ಲಾ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಆಗ್ರಹಿಸಿದರು.
ಈ ವರ್ಷದ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಮಾರ್ಚ್ ವೇಳೆಗೆ ೭ನೇ ವೇತನ ಆಯೋಗದ ವರದಿ ಜಾರಿ, ಕೇಂದ್ರ ಸಮಾನ ವೇತನ ನೀಡುವ ಮೂಲಕ ಶಿಕ್ಷಕರು,ನೌಕರರ ಹಿತ ಕಾಯಲು ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಡ ಹಾಕುವುದಾಗಿ ತಿಳಿಸಿದರು.
ಖಾಸಗಿ ಶಾಲಾ,ಕಾಲೇಜುಗಳ ಮಾನ್ಯತೆ ನವೀಕರಣ ಕಗ್ಗಂಟಾಗಿದ್ದು, ಈ ಸಂಬಂಧ ನೇಮಿಸಿದ್ದ ಸಂಕನೂರು ಸಮಿತಿ
ಶಿಫಾರಸ್ಸುಗಳನ್ನು ಯಥಾವತ್ ಜಾರಿಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಅನುದಾನಿತ ಶಾಲೆಗಳಲ್ಲಿ ೨೦೨೦ರ ತನಕ ಖಾಲಿ ಹುದ್ದೆ ತುಂಬಲು ಅನುಮತಿ ನೀಡಿ ಅನುಮೋದಿಸಲು ಏಕಗವಾಕ್ಷಿ ಪದ್ದತಿ ಜಾರಿಗೆ ತರಬೇಕು, ಅಲೆದಾಟ,ವಿಳಂಬ ತಪ್ಪಿಸಬೇಕು ಎಂದರು.
ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಿಸುವ ಮೂಲಕ ಪಿಯು ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ಶಿಸ್ತು ಮೂಡಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರಿಗೆ ಪ್ರತಿ ತಿಂಗಳ ೧ನೇ ತಾರೀಖು ವೇತನ ಬಟವಾಡೆಯಾಗಬೇಕು, ಅನುದಾನದ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ ಕೂಡಲೇ ಮಂಜೂರು ಮಾಡಿಸುವೆ ಎಂದು ಬಿಇಒ ಅವರಿಗೆ ದೂರವಾಣಿ ಮೂಲಕ ತಾಕೀತು ಮಾಡಿದರು.
ಶಿಕ್ಷಕರ ಸಂಘಗಳು ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡುವಂತೆ ಸೂಚಿಸಿದ ಅವರು, ಸದನದಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ವಕೀಲ ಎಂ.ಪಿ.ನಾರಾಯಣಸ್ವಾಮಿ, ನಗರಸಭೆ ಸದಸ್ಯ ಮುರಳಿಗೌಡ, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಉದಯಕುಮಾರ್, ಪಿಯು ಡಿಸಿ ರಾಮಚಂದ್ರಪ್ಪ, ಉಪನ್ಯಾಸಕ ಚಂದ್ರಪ್ಪ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ,ಖಾಸಗಿ ಶಾಲೆಗಳ ಎಸ್.ಮುನಿಯಪ್ಪ, ಬಡ್ತಿ ಶಿಕ್ಷಕರ ಸಂಘದ ಮುನಿಯಪ್ಪ,ಶ್ರೀನಿವಾಸಗೌಡ, ಚೆಂಗಲರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.