ಶಿಕ್ಚಕರಿಗೆ ಆರ್ಥಿಕ ನೆರವಿಗೆ ಮನವಿ

ಬೆಂಗಳೂರು,ಮೇ:೨೮- ಕೊರೋನಾ ಸಂಕಷ್ಟದ ಕಾಲದಲ್ಲಿ ಅನುದಾನ ರಹಿತ ಶಾಲೆಗಳು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿಯಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯ ಅನುದಾನ ರಹಿತ ರಾಜ್ಯಪಠ್ಯಕ್ರಮದ ಶಾಲೆಗಳ ಶಿಕ್ಷಕರಿಗೆ ೨೦೨೦-೨೧ ನೇ ಸಾಲಿಗೆ ಆರ್ಥಿಕ ಸಹಾಯ ಮಾಡುವಂತೆ ಈಜಿಪುರದ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆ ರಾಜ್ಯಪಾಲರಲ್ಲಿ ಮನವಿ ಮಾಡಿದೆ.
ಈ ಕುರಿತಂತೆ ಸುಧೀರ್ಘ ಮನವಿ ಪತ್ರವನ್ನು ನೀಡಿರುವ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಡಾ.ವಿ.ರಾಘವೇಂದ್ರರಾವ್ ಅವರು, ಅನುದಾನರಹಿತ ಶಾಲೆಗಳು ರಾಜ್ಯದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿವೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಶಾಲೆಗಳ ಶಿಕ್ಷಕರಿಗೆ ಈಗ ಆರ್ಥಿಕ ಸಹಾಯದ ಅಗತ್ಯವಿದೆ,ಸರ್ಕಾರವು ಕೂಡ ಇಂತಹ ಶಿಕ್ಷಕರಿಗೆ ಯಾವುದೆ ಸಹಾಯಧನ ನೀಡುತ್ತಿಲ್ಲ ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿ ಕಲ್ಯಾಣ ನಿಧಿಯಲ್ಲಿ ಕೋಟ್ಯಂತರ ರೂ ಇದೆ. ಇಂತಹ ಕಷ್ಟದ ಕಾಲದಲ್ಲಿ ಈ ಹಣವನ್ನು ಶಿಕ್ಷಕರಿಗೆ ನೀಡಿದರೆ ಅವರ ಬದುಕು ಹಸನಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಅನುದಾನ ರಹಿತ ರಾಜ್ಯ ಶಾಲೆಗಳು ಕಳೆದ ವರ್ಷದಿಂದಲೂ ಶಿಕ್ಷಣ ಇಲಾಖೆಯ ಗೊಂದಲಗಳ ಆದೇಶಗಳು, ಸುತ್ತೋಲೆಗಳು ಮತ್ತು ಸೂಚನೆಗಳಿಂದ ಪೋಷಕರು ಕೂಡ ಗೊಂದಲದಲ್ಲಿದ್ದು ಶಾಲೆಗಳಿಗೆ ಕಟ್ಟಬೇಕಾದ ಶುಲ್ಕವನ್ನು ಕಟ್ಟುತ್ತಿಲ್ಲ ಇದರಿಂದ ಸಾವಿರಾರು ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಎಂದು ಹೇಳಿದರು.
ಈ ಎಲ್ಲಾ ಸಮಸ್ಯಗಳಿಂದ ಹೊರಬರಲು ೨೦೨೧-೨೨ನೇ ಸಾಲಿನಲ್ಲಿ ಮಕ್ಕಳ ದಾಖಲಾತಿಯನ್ನು ಕಡ್ಡಾಯವಾಗಿ ಮಾಡುವಂತೆ ಪೋಷಕರಿಗೆ ತಿಳಿಸುವ ಸ್ಪಷ್ಟವಾದ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ಶಾಲೆಗಳಿಗೆ ಸಹಾಯ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.