ಶಾ – ಬಿಎಸ್‌ವೈ ಭೇಟಿ ಮಹತ್ವದ ಚರ್ಚೆ

ಬೆಂಗಳೂರು,ಆ.೫- ಬಿಜೆಪಿ ಹಾಗೂ ಸರ್ಕಾರದ ಮಟ್ಟದಲ್ಲಿ ಬದಲಾವಣೆಯ ಮಾತುಗಳು ಬಿರುಸಾಗಿರುವಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿ ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರ ಹಿಡಿಯಲು ರಾಜ್ಯದಲ್ಲಿ ಆಗಬೇಕಾದ ಮಹತ್ತರ ಬದಲಾವಣೆಗಳ ಬಗ್ಗೆ ಚರ್ಚೆಸಿರುವುದು ಹಲವು ವ್ಯಾಖ್ಯಾನಗಳಿಗೆ ಎಡೆ ಮಾಡಿದೆ.
ವಿವಿಧ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಇಂದು ಬೆಳಿಗ್ಗೆ ಪ್ರತ್ಯೇಕವಾಗಿ ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು, ಸರ್ಕಾರ ಮತ್ತು ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಕೆಲ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಆದಷ್ಟು ಬೇಗ ತೀರ್ಮಾನಗಳನ್ನು ಮಾಡಿ ಎಂದು ಶಾರವರಿಗೆ ಹೇಳಿದರು.
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಸೇರಿದ್ದ ಜನಸಾಗರದ ಬಗ್ಗೆಯೂ ಶಾ ಮುಂದೆ ಪ್ರಸ್ತಾಪಿಸಿದ ಯಡಿಯೂರಪ್ಪ ಅವರು, ಪ್ರತಿಪಕ್ಷಗಳ ವೇಗಕ್ಕೆ ಕಡಿವಾಣ ಹಾಕಲು ರಣತಂತ್ರ ರೂಪಿಸಬೇಕಿದೆ. ಹಾಗಾಗಿ, ಪಕ್ಷ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಈ ನಿಟ್ಟಿನಲ್ಲೂ ಕೆಲ ಕ್ರಮಗಳು ಆಗಬೇಕು ಎಂದು ಹೇಳಿದರು.
ಕೇಂದ್ರ ಗೃಹ ಸಚಿವರ ಜತೆ ಮುಕ್ತವಾಗಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡ ಯಡಿಯೂರಪ್ಪರವರು, ರಾಜ್ಯದಲ್ಲಿ ಪಕ್ಷ ಸಂಘಟನೆ ನಿರೀಕ್ಷಿತ ವೇಗ ಮತ್ತು ಹಾದಿಯಲ್ಲಿ ಸಾಗುತ್ತಿಲ್ಲ. ಸರ್ಕಾರದ ಇಮೇಜ್ ಹೆಚ್ಚಿಸುವ ಕೆಲಸವೂ ಆಗಬೇಕಿದೆ. ನಾನು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ತೀರ್ಮಾನಗಳನ್ನು ಮಾಡಿ ಎಂದು ಶಾ ರವರಲ್ಲಿ ಮನವಿ ಮಾಡಿದರು ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಮಾತುಗಳನ್ನು ಆಲಿಸಿದ ಶಾರವರು ಸೂಕ್ತ ತೀರ್ಮಾನಗಳನ್ನು ಶೀಘ್ರ ಮಾಡುವ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆ ಇದೆ.