ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಮುಚ್ಚುವ ಪ್ರಕ್ರಿಯೆ ಖಂಡನೀಯ

ಮೈಸೂರು. ಡಿ.30. ಭಾರತೀಯ ಭಾಷಾ ವಿಶ್ವವಿದ್ಯಾಲಯದೊಳಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಗಳನ್ನು ತಕ್ಷಣ ನಿಲ್ಲಿಸಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರಕ್ಕೆ ಸ್ವಾಯತ್ತತೆ ಸ್ಥಾನಮಾನ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕನ್ನಡ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಇಂದು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ವೆಂಕಟೇಶ್ ಮೂರ್ತಿ ಅವರಿಗೆ ಮನವಿ ನೀಡಿದ ಸಮಿತಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಆರಂಭವಾಗಿ ಹತ್ತು ವರ್ಷಗಳಾಗಿದ್ದರೂ ಅದಕ್ಕಿನ್ನೂ ಸ್ವಾಯತ್ತತೆ ದೊರಕಿಲ್ಲ. ಈಗಾಗಲೇ ವಿಳಂಬವಾಗಿರುವ ಸ್ವಾಯತ್ತತೆ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲವು ಪ್ರಯತ್ನಗಳನ್ನು ಮಾಡಿದ್ದು ನಮ್ಮ ಗಮನಕ್ಕೆ ಬಂದು ಕೊಂಚ ಭರವಸೆ ಮೂಡಿಸಿತ್ತು. ಆದರೆ ಈಗ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಗಳು ಆರಂಭವಾಗಿರುವುದು ಖಂಡನಾರ್ಯವಾಗಿದೆ ಎಂದರು.
ಭಾರತೀಯ ಭಾಷಾ ಸಂಸ್ಥಾನವನ್ನು ಒಂದು ಕೇಂದ್ರ ವಿಶ್ವವಿದ್ಯಾಲಯ ಮಾಡಹೊರಟಿರುವುದು ಮತ್ತು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಅದರ ಒಂದು ವಿಭಾಗವನ್ನಾಗಿ ಮಾಡ ಹೊರಟಿರುವ ಪ್ರಯತ್ನಗಳು ನಮ್ಮ ಗಮನಕ್ಕೆ ಬಂದಿದ್ದು ಇದು ಸ್ವಾಯತ್ತ ಕೇಂದ್ರವಾಗಿ ವಿಶಾಲವಾಗಿ ಬೆಳೆಯಬೇಕಾದ ಶಾಸ್ತ್ರೀಯ ಕನ್ನಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಇಂತಹ ಪ್ರಯತ್ನಗಳನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಶೈಕ್ಷಣಿಕ ಸಿಬ್ಬಂದಿಗೆ ತಾವು ನೀಡಿರುವ ಬಿಡುಗಡೆ ಪತ್ರವನ್ನು ಹಿಂಪಡೆದು ಅವರನ್ನು ಸೇವೆಯಲ್ಲಿ ಮುಂದುವರೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ಸಿಬ್ಬಂದಿಯ ಹೊಸ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಅಸ್ತಿತ್ವ ಮತ್ತು ಕನ್ನಡ ಬೆಳವಣಿಗೆಯ ಹಿತದೃಷ್ಟಿಯಿಂದ ನಮ್ಮ ಆಗ್ರಹಗಳನ್ನು ತಕ್ಷಣ ಕಾರ್ಯರೂಪಕ್ಕೆ ತರದಿದ್ದಲ್ಲಿ ಭಾರತೀಯ ಭಾಷಾ ಸಂಸ್ಥಾನದ ಮುಂದೆ ಕರ್ನಾಟಕದ ಎಲ್ಲಾ ಕನ್ನಡಪರ ಸಂಘಟನೆಗಳ ಜೊತೆಗೂಡಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಪ.ಮಲ್ಲೇಶ್, ಸ.ರ.ಸುದರ್ಶನ, ಪೆÇ್ರ.ಕೆ.ಎಸ್.ಭಗವಾನ್, ಪೆÇ್ರ.ಕೃಷ್ಣಮೂರ್ತಿ ಹನೂರು, ಪೆÇ್ರ.ಕಾಲೇಗೌಡ ನಾಗವಾರ, ಪೆÇ್ರ.ಪಂಡಿತಾರಾಧ್ಯ, ಡಾ.ಮನೋಹರ್, ನಾ.ದಿವಾಕರ, ಉಗ್ರನರಸಿಂಹೇಗೌಡ, ಜಿ.ಪಿ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.