ಶಾಸಕ ಹರ್ಷವರ್ಧನ್ ವಿರುದ್ಧ ಸಿದ್ದು ವಾಗ್ದಾಳಿ

ಮೈಸೂರು.ನ.೧೦- ನಂಜನಗೂಡು ಬಿಜೆಪಿ ಶಾಸಕ ಕೇವಲ ದುಡ್ಡು ಮಾಡುವುದನ್ನು ಬಿಟ್ಟು ಇನ್ನೇನು ಮಾಡಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡುವುದೇ ಶಾಸಕ ಹರ್ಷವರ್ಧನ್ ಕೆಲಸವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ನಂಜನಗೂಡು ಬಿಜೆಪಿ ಶಾಸಕ ದುಡ್ಡು ಮಾಡುವುದನ್ನು ಬಿಟ್ಟು ಇನ್ನೇನು ಮಾಡಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಗೆಲ್ಲಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ನಂಜನಗೂಡಿನ ಹೊಸವೀಡು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಹರ್ಷವರ್ಧನ್ ವಿರುದ್ಧ ವಾಗ್ದಾಳಿ ನಡೆಸಿದರು. ಉಪ ಚುನಾವಣೆ ವೇಳೆ ನಂಜನಗೂಡು ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ. ನಾವು ಮಾಡಿದ ಯೋಜನೆಗಳಿಗೆ ಗುದ್ದಲಿಪೂಜೆ ಮಾಡುವುದೇ ನಂಜನಗೂಡು ಶಾಸಕನ ಕೆಲಸವಾಗಿದೆ ಎಂದು ಟೀಕಿಸಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ನೀವೆಲ್ಲಾ ನಿರ್ಧರಿಸಬೇಕೆಂದು ಸಿದ್ದರಾಮಯ್ಯ ಕರೆ ನೀಡಿದರು.
ತಾಲ್ಲೂಕಿನ ೧೨೬ ಗ್ರಾಮಗಳಿಗೆ ಕುಡಿಯುವ ನೀರಿನ ಬಹುಕೋಟಿ ಯೋಜನೆ, ಹುಲ್ಲಹಳ್ಳಿ ಭಾಗದ ೨೬ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ನಂಜನಗೂಡು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮೀಣ ಪ್ರದೇಶಗಳಿಗೆ ಕಾಂಕ್ರಿಟ್ ರಸ್ತೆ, ಒಳಚರಂಡಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳಿಗಾಗಿ ನೂರಾರು ಕೋಟಿ ಹಣವನ್ನು ಮಂಜೂರು ಮಾಡಲಾಗಿತ್ತು.
ನಂಜನಗೂಡು ವಿಧಾನಸಭೆ ಕ್ಷೇತ್ರದಲ್ಲಿ ಬೆಜೆಪಿಯವರು ಯಾವುದೇ ಕೆಲಸ ಕಾರ್ಯ ನಡೆಸುತ್ತಿಲ್ಲ ಎಂದು ಆರೋಪಿಸಿದರು. ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಪ್ರೇಮಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕೆಚ್ಚೆದೆಯ ಹೋರಾಟಗಾರ. ಇಂತಹ ಮಹಾನ್ ಹೋರಾಟಗಾರನ ಪುತ್ಥಳಿಯನ್ನು ಹೊಸವೀಡು ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಅಂದ್ರೆ ಅದು ನಿಜಕ್ಕೂ ಸಂತಸ ತಂದಿದೆ. ಸಂಗೊಳ್ಳಿ ರಾಯಣ್ಣ ಹುಟ್ಟಿದ ಸಂಗೊಳ್ಳಿ ಗ್ರಾಮ ಹಾಗೂ ನೇಣಿಗೇರಿಸಿದ ನಂದಿಗುಡ್ಡ ಗ್ರಾಮದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಸುಮಾರು ೨೫೦ ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿಪಡಿಸಿ ಅವರ ಹೆಸರಿನಲ್ಲಿ ಒಂದು ಸೈನಿಕ ಶಾಲೆ ತೆರೆಯಲು ಮುಂದಾಗಿದ್ದೆ. ಯುವಕರು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಿಧಾನಪರಿಷತ್ ಸದಸ್ಯ ಧರ್ಮಸೇನ, ಮಾಜಿ ಸಂಸದ ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.