ಶಾಸಕ ಸ್ಥಾನದಿಂದ ಭೀಮನಾಯ್ಕ ವಜಾಗೊಳಿಸಲು ಆಗ್ರಹ

ಹರಪನಹಳ್ಳಿ ನ 10 : ಗುಂಡಾ ವರ್ತನೆ ಪ್ರದರ್ಶನ ಮಾಡಿದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಭೀಮನಾಯ್ಕ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ಬಿಜೆಪಿ ಪಕ್ಷದವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಸ್.ಭೀಮನಾಯ್ಕ ಹಾಗೂ ಅವರ ಬೆಂಬಲಿಗರು ಮತ್ತು ಗುಂಡಾಗಳ ಗುಂಪು ಕಟ್ಟಿಕೊಂಡು ಅನಾಗರೀಕರಂತೆ ಭುಜ ತಟ್ಟಿ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರ ಮೇಲೆ ಸ್ವತಃ ಹಲ್ಲೆ ಮಾಡಿರುವುದಲ್ಲದೇ ಬಾಡಿಗೆ ಗುಂಡಾಗಳಿಂದ ಹಲ್ಲೆ ಮಾಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಗುಂಡಾವರ್ತನೆ ತೋರಿರುವುದಲ್ಲದೇ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಭೀಮನಾಯ್ಕ ಅವರನ್ನು ಶಾಸಕತ್ವ ಸ್ಥಾನದಿಂದ ವಜಾಗೊಳಿಸುವುದರ ಜೊತೆಗೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಎಂ.ಪಿ.ನಾಯ್ಕ, ಆರ್.ಲೋಕೇಶ್, ಸಣ್ಣಹಾಲಪ್ಪ, ಎಸ್.ಪಿ.ಲಿಂಬ್ಯಾನಾಯ್ಕ, ರಾಘವೇಂದ್ರಶೆಟ್ಟಿ, ಬಾಗಳಿ ಕೊಟ್ರೇಶಪ್ಪ, ಪುರಸಭೆ ಅಧ್ಯಕ್ಷ ಇಂಜತ್ಕರ್ ಮಂಜುನಾಥ, ಪೀರಾಸಾಬ್, ಕಿರಣ್ ಮತ್ತಿತರರು ಭಾಗವಹಿಸಿದ್ದರು.