
ರಾಯಚೂರು,ಏ.೮- ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ರೊಂದಿಗೆ ನಡೆಸಿದ ಸಂಭಾಷಣೆಯುಳ್ಳ ಆಡಿಯೋಯೊಂದರಲ್ಲಿ ಹಿಂದೂ ಧರ್ಮ ಭಾವನೆಗಳಿಗೆ ಧಕ್ಕೆ ತಂದಿರುವ ಹಿನ್ನಲೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ವಿರುದ್ದ ಸಂವಿದಾನದ ಆರ್ಟಿಕಲ್ ೨೯೫ ಎ ಮತ್ತು ೫೦೫ ಬಿ ಅಡಿಯಲ್ಲಿ ಅವರ ವಿರುದ್ದ ಜೆಡಿಎಸ್ ಎಸ್.ಸಿ.ಎಸ್ಟಿ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ ಅವರು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಅಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದ್ದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಶಾಸಕ ಡಾ.ಎಸ್.ಶಿವರಾಜ್ ಪಾಟೀಲ ಬಳಸಿರುವ ಪದಗಳು ಹಿಂದೂಗಳ ಭಾವನೆಗೆ ಧಕ್ಕೆ ತರುವಂತವುಗಳಾಗಿವೆ.ನಾನೇ ದೇವರು ನನಗೆ ಎಲ್ಲರೂ ಕಾಲು ಮುಗಿಯಬೇಕು ಎಂದು ಹೇಳುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ.ಕೂಡಲೇ ಬಿಜೆಪಿ ಪಕ್ಷ ಪ್ರದಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಅಗೌರವ ತೋರಿರುವ ಶಾಸಕ ಶಿವರಾಜ ಪಾಟೀಲ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಇವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದುಗಳ ಬಗ್ಗೆ ಟ್ವೀಟ್ ಮಾಡಿದ್ದ ನಟ ಚೇತನ ಅವರನ್ನು ಜೈಲಿಗೆ ಅಟ್ಟಲಾಗುತ್ತೆ. ಸಂಸತ್‌ನ ವಿರೋಧಪಕ್ಷವಾಗಿರುವ ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯದ ತೀರ್ಪು ಬಂದ ಒಂದೇ ದಿನದಲ್ಲಿ ಸಂಸತ್ ಸದಸ್ಯತ್ವವನ್ನು ರದ್ದು ಮಾಡುವಲ್ಲಿ ತೋರುವ ಆತುರತೆಯನ್ನು ಬಿಜೆಪಿಯ ವರಿಷ್ಠ ನಾಯಕ ಮೋದಿಯವರನ್ನು ಬಾಯಿಗೆ ಬಂದ ಹೀಯಾಳಿಸಿದಲ್ಲದೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಬಿಜೆಪಿ ಶಾಸಕರ ವಿರುದ್ಧ ಮೃಧುಧೋರಣೆ ಯಾಕೆ? ವಿರೋಧ ಪಕ್ಷದವರಿಗೊಂದು ನ್ಯಾಯ ಆಡಳಿತ ಪಕ್ಷದವರಿಗೊಂದು ನ್ಯಾಯ? ಈ ದ್ವಿಮುಖ ನ್ಯಾಯ ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಇಂದು ನಾವು ಡಾ. ಶಿವರಾಜ್ ಪಾಟೀಲರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಆತ್ತನೂರು,ಎನ್.ಶಿವಶಂಕರ ವಕೀಲರು,ವಿಶ್ವನಾಥ ಪಟ್ಟಿ, ತಿಮ್ಮಾರೆಡ್ಡಿ, ವಿಶ್ವನಾಥಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.