ಶಾಸಕ ವಿಶ್ವನಾಥ್ ಹತ್ಯೆಗೆ ಸಂಚು

ಬೆಂಗಳೂರು,ಡಿ.೧- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಹತ್ಯೆಗೆ ಪಿತೂರಿ ನಡೆಸಿರುವ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಎಸ್.ಆರ್. ವಿಶ್ವನಾಥ್ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಗೋಪಾಲಕೃಷ್ಣ ಅವರ ಮನೆಯಲ್ಲೇ ೫ ತಿಂಗಳ ಹಿಂದೆ ಸಂಚು ರೂಪಿಸಿರುವ ವೀಡಿಯೊ ಸಂಭಾಷಣೆಯಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ವಿಶ್ವನಾಥ್ ವಿರುದ್ಧ ಗೆಲುವು ಸಾಧಿಸಲು ಬರೋಬ್ಬರಿ ೧೦೦ ಕೋಟಿ ರೂ. ಬೇಕು. ೫ ಕೋಟಿ ರೂ. ಕೊಡುತ್ತೇನೆ, ನೀವೇ ಹೊಡೆದು ಹಾಕಿಬಿಡಿ. ಇದಕ್ಕಾಗಿ ನೆರೆಯ ಆಂಧ್ರದಿಂದ ಕ್ಷಿಪ್ರ ಗುರಿಕಾರರನ್ನು ಕರೆಸಿ ಹೊಡೆಸೋಣ, ಪ್ರತಿನಿತ್ಯ ಬೆಳಿಗ್ಗೆ ತೋಟಕ್ಕೆ ವಿಶ್ವನಾಥ್ ಒಬ್ಬನೇ ಹೋಗುತ್ತಿರುತ್ತಾನೆ. ಹೊಡಿಬಹುದು, ಆದರೆ ಯಾವುದೇ ಕಾರಣಕ್ಕೂ ಗುರಿ ತಪ್ಪಬಾರದು. ಒಂದು ವೇಳೆ ವಿಶ್ವನಾಥ್ ಅವರನ್ನು ಹತ್ಯೆ ಮಾಡಿದರೆ ಸುಲಭವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂದು ಗೋಪಾಲಕೃಷ್ಣ ನಡೆಸಿರುವ ಸಂಭಾಷಣೆ ವೀಡಿಯೊದಲ್ಲಿ ದಾಖಲಾಗಿದೆ.
ಶಾಸಕ ಎಸ್.ಆರ್ ವಿಶ್ವನಾಥ್ ಅವರ ಹತ್ಯೆಯ ಬಗ್ಗೆ ಪಿತೂರಿ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್, ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಕುಳ್ಳ ದೇವರಾಜ್ ವಿಚಾರಣೆ
ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಪಿತೂರಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಕುಳ್ಳ ದೇವರಾಜ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ವೀಡಿಯೊ ಬಹಿರಂಗಗೊಂಡ ಬೆನ್ನಲ್ಲೆ ಸಿಸಿಬಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ವೀಡಿಯೊ ವಿಚಾರ ಬಹಿರಂಗವಾಗುತ್ತಲೆ ಸಿಸಿಬಿ ಅಧಿಕಾರಿಗಳು ವಿಶ್ವನಾಥ್ ಅವರನ್ನು ಸಂಪರ್ಕಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವನಾಥ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್‌ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದರು.
ಆದರೆ ಗೋಪಾಲಕೃಷ್ಣ ಅವರನ್ನು ನಿನ್ನೆಯೇ ಬಿಟ್ಟು ಕಳುಹಿಸಿದ್ದಾರೆ. ಕುಳ್ಳ ದೇವರಾಜ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ದೂರು ನೀಡಿಲ್ಲ
ತಮ್ಮ ಹತ್ಯೆಗೆ ಸಂಚು ರೂಪಿಸಿರುವ ವೀಡಿಯೊ ಬಹಿರಂಗವಾಗಿರುವ ಬೆನ್ನಲ್ಲೆ ಶಾಸಕ ಎಸ್.ಆರ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿ ಈ ಸಂಬಂಧ ಇದುವರೆಗೆ ಪೊಲೀಸರಿಗೆ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊಲೆ ಬೆದರಿಕೆ ಸಂಬಂಧ ಗೋಪಾಲಕೃಷ್ಣ ಅವರು ಪಿತೂರಿ ನಡೆಸಿರುವ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದಷ್ಟೇ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಂದು ಸಂಜೆ ೪ ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ವಿವರ ನೀಡುವುದಾಗಿ ಹೇಳಿದ್ದಾರೆ.

ವಿಶ್ವನಾಥ್‌ಗೆ ಭದ್ರತೆ
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಪಿತೂರಿ ನಡೆಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಪಡೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶಾಸಕರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗುವುದು ಎಂದು ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸ್ವತಃ ವಿಶ್ವನಾಥ್ ಅವರ ಬಳಿಯೇ ಈ ಬಗ್ಗೆ ಚರ್ಚಿಸಿ ಅದರ ಆಧಾರದ ಮೇಲೆ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಪರಿಶೀಲಿಸುತ್ತೇವೆ ಎಂದರು.