ಶಾಸಕ ವಿರೂಪಾಕ್ಷಪ್ಪ ಶೀಘ್ರ ಬಂಧನ: ಅರಗ

ಶಿವಮೊಗ್ಗ , ಮಾ.6-ಲೋಕಾಯುಕ್ತ ದಾಳಿಯ ನಂತರ ತಲೆಮರೆಸಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸದ್ಯದಲ್ಲೇ ಬಂಧಿನ ವಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸ್ ಇಲಾಖೆ ಒಳ್ಳೆಯ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇವೆ. ನಾವು ಲೋಕಾಯುಕ್ತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲಿಲ್ಲ. ಆದ್ದರಿಂದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ದಾಳಿಗೊಳಗಾಗಿ ಬಂಧನಕ್ಕೊಳಪಟ್ಟರು. ಸದ್ಯದಲ್ಲಿಯೇ ವಿರೂಪಾಕ್ಷಪ್ಪ ಅವರ ಬಂಧನವಾಗುತ್ತದೆ ಎಂದರು.
ಸರ್ಕಾರ ಹಸ್ತಕ್ಷೇಪ ಮಾಡಿದ್ದರೇ ಅವರ ಮಗನ ಬಂಧನ ಆಗುತ್ತಿರಲಿಲ್ಲ. ಅಪ್ಪ ಇರಲಿ, ಮಗ ಇರಲಿ, ಯಾರೇ ಇದ್ದರೂ ತಪ್ಪು ಮಾಡಿದ್ದರೇ ಶಿಕ್ಷೆ ಆಗಲಿ. ನಾವು ಭ್ರಷ್ಟಾಚಾರ ಮುಕ್ತವಾಗಿದ್ದೇವೆ. ಹೀಗಿರುವಾಗ ಕಾಂಗ್ರೆಸ್‌ನವರು ಯಾರ ವಿರುದ್ಧ ಬಂದ್ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ತಾಯಿ ಎನಿಸಿಕೊಂಡವರೇ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಅವರ ಕೇಂದ್ರದ ನಾಯಕರು, ರಾಜ್ಯದ ನಾಯಕರು ಭ್ರಷ್ಟಾಚಾರವೆಸಗಿ ಬಹಳಷ್ಟು ದಿನ ಜೈಲಿನಲ್ಲಿ ಇದ್ದರು. ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಅಂತಹವರು ಇವತ್ತು ಭ್ರಷ್ಟಾಚಾರದ ವಿರುದ್ದ ಬಂದ್‌ಗೆ ಕರೆ ನೀಡುತ್ತಾರೆ. ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ಅವರು ಗೇಲಿ ಮಾಡಿದರು.