ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕಲಬುರಗಿ,ಮಾ.4-ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯಪಾಲರು ಕೂಡಲೇ ರಾಜ್ಯದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದಲ್ಲಿಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಶಾಸಕಿ ಕನೀಜ್ ಫಾತಿಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಿವಾನಂದ ಪಾಟೀಲ, ಸುಭಾಷ ರಾಠೋಡ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಿಂದ ಜಿಲ್ಲಾ ಪಂಚಾಯತಿ ಕಚೇರಿ, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.
ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕರ ಮನೆಯಲ್ಲಿ 8 ಕೋಟಿ ನಗದು ಮತ್ತು ಸಾಕಷ್ಟು ಚಿನ್ನ ದೊರೆತಿರುವುದು ನೋಡಿದರೆ ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ಭ್ರಷ್ಟಾಚಾರಕ್ಕೆ ಇಳಿದಿದೆ ಎಂಬುವುದನ್ನು ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಮನವಿಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಮೀಲಾಗಿರುವುದು ಕಂಡು ಬರುತ್ತದೆ ಎಂದು ಆರೋಪಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಮಠಕ್ಕೆ ಹಣ ತರಲು 30% ಲಂಚ ನೀಡಬೇಕಿದೆ ಎಂದು ಈ ಹಿಂದೆ ಮಠಾಧೀಶರೊಬ್ಬರು ಹೇಳಿದ್ದರು. ಗುತ್ತಿಗೆದಾರ ಸಂತೋಷ ಪಾಟೀಲ ಈಶ್ವರಪ್ಪನವರ ಮೇಲೆ ಡೆತ್‍ನೋಟ್ ಬರೆದಿಟ್ಟು ಸಾವನ್ನಪ್ಪಿದರು. ಈ ಸರ್ಕಾರದಲ್ಲಿ ಇಷ್ಟೆಲ್ಲಾ ಹಗರಣಗಳು ನಡೆಯುತ್ತಿದ್ದು, ರಾಜ್ಯಪಾಲರು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು, ಈ ಲಂಚದ ಹಗರಣದ ಕುರಿತು ಕರ್ನಾಟಕದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಂದ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಮುಖಂಡರಾದ ದಶರಥ ಬಾಬು ಒಂಟಿ, ಸಂಜಯಸಿಂಗ್, ಲಿಂಗರಾಜ ತಾರಫೈಲ್, ಶಿವಾನಂದ ಹೊನಗುಂಟಿ, ಪ್ರವೀಣ್ ಪಾಟೀಲ್ ಹರವಾಳ, ಈರಣ್ಣ ಝಳಕಿ, ಕಿಶೋರ್ ಗಾಯಕವಾಡ, ಲತಾ ರವಿ ರಾಠೋಡ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.