ಶಾಸಕ ರೇಣುಕಾಚಾರ್ಯಗೆ ಕೊರೊನಾ

ದಾವಣಗೆರೆ, ಏ.18; ಮಸ್ಕಿ ಸೇರಿದಂತೆ ಉಪ ಚುನಾವಣೆಗಾಗಿ ಕಳೆದ 15 ದಿನಗಳಿಂದ ಪ್ರಚಾರದಲ್ಲಿ ತೊಡಗಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರು, ಶಾಸಕರು, ಪಕ್ಷದ ಮುಖಂಡರೊಂದಿಗೆ ಮಸ್ಕಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ರೇಣುಕಾಚಾರ್ಯ ಜೊತೆ ಪ್ರಚಾರದಲ್ಲಿ ಭಾಗಿಯಾದ ಬಹುತೇಕರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ 15 ದಿನಗಳಿಂದ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು.ಕೊರೋನಾ ಟೆಸ್ಟ್ನಲ್ಲಿ ಶಾಸಕ ರೇಣುಕಾಚಾರ್ಯರಿಗೆ ಸೋಂಕು ಇರುವುದು ದೃಢಪಟ್ಟಿದೆ. ರೇಣುಕಾಚಾರ್ಯರ ಪತ್ನಿ ಸುಮಾ ಅವರೂ ಸಹ ಟೆಸ್ಟ್ ಮಾಡಿಸಿದ್ದು, ವರದಿ ನಿರೀಕ್ಷಿಸಿದೆ. ಪ್ರಾಥಮಿಕ ವರದಿಯಲ್ಲಿ ರೇಣುಕಾಚಾರ್ಯರಿಗೆ ನೆಗೆಟಿವ್ ಬಂದಿದ್ದರೂ,ಇAದು ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಐಸೋಲೇಶನ್‌ಗೆ ಒಳಗಾಗಿದ್ದಾರೆ.ಕಳೆದ 15 ದಿನಗಳಿಂದಲೂ ನಿರಂತರ ಉಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ರೇಣುಕಾಚಾರ್ಯ ಈಚೆಗೆ ತಮ್ಮೊಂದಿಗೆ ಸಂಪರ್ಕದಲ್ಲಿದ್ದ ಜನರು, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಮುಖಂಡರು, ಸಾರ್ವಜನಿಕರು, ಬೆಂಬಲಿಗರೂ ತಕ್ಷಣವೇ ಕೋವಿಡ್ ಟೆಸ್ಟ್ ಮಾಡಿಸುವಂತೆ ಕೋರಿದ್ದಾರೆ. ಅಲ್ಲದೇ, ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು. ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.