
ಬೆಂಗಳೂರು,ಮಾ.28- ಭ್ರಷ್ಟಾಚಾರ ಆರೋಪ ಪಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸರಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.
ಪುತ್ರನ ನಿವಾಸದಲ್ಲಿ ದಾಖಲೆ ಇಲ್ಲದ ಕೋಟಿ ಕೋಟಿ ಹಣ ಪತ್ತೆ ಪ್ರಕರಣದಲ್ಲಿ ಮಾಡಾಳು ಅವರನ್ನು ನಿನ್ನೆ ರಾತ್ರಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇಂದು ಬಂಧನದ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮಧ್ಯಾಹ್ನದ ವೇಳೆ ಶಾಸಕರನ್ನು ಜನಪ್ರತಿನಿಧಿಗಳ ಕೋರ್ಟ್ಗೆ ಹಾಜರುಪಡಿಸಿದ್ದರು.
ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಧೀಶ ಜಯಂತ್ ಕುಮಾರ್, ಶಾಸಕರನ್ನು ಐದು ದಿನಗಳವರೆಗೆ ಲೋಕಾಯುಕ್ತ ಪೊಲೀಸರಿಗೆ ನೀಡಿ ಆದೇಶ ನೀಡಿದ್ದಾರೆ.
ಲೋಕಾಯುಕ್ತ ಎಸ್ಪಿ ಅಶೋಕ್ ಸಮ್ಮುಖದಲ್ಲಿ ವಿರೂಪಾಕ್ಷಪ್ಪ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ಈ ವೇಳೆ ಲೋಕಾಯುಕ್ತ ಪರ ವಕೀಲ ಸಂತೋಷ್ ಹತ್ತು ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಇದೇ ವೇಳೆ ಮಾಡಾಳು ವಿರೂಪಾಕ್ಷಪ್ಪ ಪರ ವಕೀಲರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದರು.