ಶಾಸಕ ಮಾಡಾಳು‌ ವಿರೂಪಾಕ್ಷಪ್ಪ ಸೇರಿ ಪುತ್ರರ ಬಂಧನಕ್ಕೆ ಶ್ರೀರಾಮ‌ಸೇನೆ ಒತ್ತಾಯ

ದಾವಣಗೆರೆ.ಮಾ.೩:  ಕಳೆದ ೫ ವರ್ಷಗಳಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಕುಟುಂಬ ಕೋಟಿಗಟ್ಟಲೆ ಹಣ, ಆಸ್ತಿಯನ್ನು ಲೂಟಿ , ಹಣ, ಆಸ್ತಿಯನ್ನು ಲೂಟಿ ಹೊಡೆದಿದ್ದು, ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಅವರು ಹಾಗೂ ಪುತ್ರನ ಮೇಲೆ ಪ್ರಕರಣ ದಾಖಲಿಸಿದ್ದು, ಈ ಕೂಡಲೇ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಾಗೂ ಮುಖ್ಯಮಂತ್ರಿಗಳು ಸೂಕ್ತ ತನಿಖೆಗೆ ಸೂಚಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ. ಮಣಿ ಸರ್ಕಾರ್  ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೩ ರಲ್ಲಿ  ದಾವಣಗೆರೆ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನ ಪಡೆದವರಲ್ಲಿ ಮಾಡಾಳ್ ಕುಟುಂಬದವರು ಇದ್ದು, ಶ್ರೀರಾಮ ಸೇನೆ ಪ್ರಕರಣ  ದಾಖಲಿಸಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅದರ ವಿಚಾರಣೆ ಇಂದಿಗೂ ನಡೆಯುತ್ತಿದೆ ಎಂದರು.೨೦೧೩ ದಲ್ಲಿ ದೂಡಾದಿಂದ ಜೆ.ಹೆಚ್. ಪಟೇಲ್ ಬಡಾವಣೆಯ ಬಡವರ ಪಾಲಿನ ನಿವೇಶನವನ್ನು ಕಬಳಿಸಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಅವರು ಪುತ್ರರಾದ ಎಂ.ವಿ. ಮಲ್ಲಿಕಾರ್ಜುನ, ಎಂ.ವಿ. ಪ್ರವೀಣ್ ಕುಮಾರ್, ಸೊಸೆ ಹೆಚ್.ಜಿ. ಸುಧಾರಾಣಿ ಹೆಸರಿನಲ್ಲಿ ನಿವೇಶನ ಪಡೆದಿದ್ದು, ಸೇನೆ ಪ್ರಕರಣ ದಾಖಲಿಸಿದೆ. ಅವರೆಲ್ಲಾ ಜಾಮೀನಿನ ಮೇಲೆ ಹೊರಗಿದ್ದು, ನಾಳೆ ಬೆಂಗಳೂರಿಗೆ ತೆರಳಿ ಅವರ ಜಾಮೀನು ರದ್ದು ಪಡಿಸುವಂತೆ ಪಿಟಿಷನ್ ಹಾಕುತ್ತೇನೆ ಎಂದು ಮಾಹಿತಿ ನೀಡಿದರು.ಶಾಸಕರು ಪುತ್ರರಾದ ಮಲ್ಲಿಕಾರ್ಜುನ್ ಚನ್ನಗಿರಿ, ದಾವಣಗೆರೆಯಲ್ಲಿ, ಪ್ರವೀಣ್ ಕುಮಾರ್ ಚನ್ನಗಿರಿಯಲ್ಲಿ ಹಾಗೂ ಲೋಕಾಯುಕ್ತರ ಬಲೆಗೆ ಬಿದ್ದು ಪ್ರಶಾಂತ್ ಅವರು ಬೆಂಗಳೂರಿನಲ್ಲಿ ಕೋಟಿಗಟ್ಟಲೆ ಹಣ, ಆಸ್ತಿ ಮಾಡಿದ್ದಾರೆ. ಪ್ರಶಾಂತ್ ಈ ಹಿಂದೆ ಅಕ್ರಮವೆಸಗಿ ಅಮಾನತ್ತಾಗಿದ್ದರು. ಆದರೂ ಈಗ ದೊಡ್ಡ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಶಾಸಕರು ಈ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯ ಮಂತ್ರಿಗಳು ಸೂಕ್ತ ತನಿಖೆ ನಡೆಸಿ,  ಕೂಡಲೇ ಶಾಸಕರನ್ನು ಜೈಲಿಗಟ್ಟಬೇಕು.ಇಲ್ಲವಾದಲ್ಲಿ ಅವರು ಮನೆ ಮುಂದೆ ಧರಣಿ ಕೂರಲಿದ್ದೇವೆ. ಸೇನೆ ವತಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಣಿ ಸರ್ಕಾರ್  ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ  ಉಪಾಧ್ಯಕ್ಷ ಆಲೂರು ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಸಾಗರ್,  ಖಜಾಂಚಿ ಶ್ರೀಧರ್, ಸಂಘಟನಾ ಕಾರ್ಯದರ್ಶಿ ವಿನೋದ್ ರಾಜ್, ನಗರಾಧ್ಯಕ್ಷ ರಾಹುಲ್,  ಉತ್ತರ ವಲಯದ ಅಧ್ಯಕ್ಷ ರಮೇಶ್, ದಕ್ಷಿಣ ವಲಯದ ಅಧ್ಯಕ್ಷ ರಾಜು, ಅವಿನಾಶ್, ರಘು,  ವಿನಯ್, ವಿನೋದ್ ಇನ್ನಿತರು ಇದ್ದರು.